ಚೆಂಬು:ಕಾಡಾನೆ ದಾಳಿಗೆ ವ್ಯಕ್ತಿ ಬಲಿ :ಬುಧವಾರ ತಡರಾತ್ರಿ ನಡೆದ ಘಟನೆ
ಮಡಿಕೇರಿ:ಚೆಂಬು ಗ್ರಾಮದ ದಬ್ಬಕ್ಕ ಭಾಗದಲ್ಲಿ ಇಂದು ರಾತ್ರಿ ಹೊತ್ತಲ್ಲಿ ಆನೆ ದಾಳಿಯಿಂದ ಕೊಪ್ಪದ ಶಿವಪ್ಪ (72) ಎಂಬ ರೈತ ಮೃತಪಟ್ಟಿದ್ದಾರೆ. ವಿಷಯ ತಿಳಿದೊಡನೆ ಶಾಸಕರ ಸೂಚನೆ ಮೇರೆಗೆ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಧಾವಿಸಿ, ಶವವನ್ನು ಇರಿಸಿದ ಸಂಪಾಜೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರ ಪಡೆದುಕೊಂಡರು.
ಸ್ಥಳೀಯರೊಂದಿಗೆ ಮಾತನಾಡಿದ ಬಳಿಕ, ವಿಷಯವನ್ನು ಶಾಸಕರಿಗೆ ತಿಳಿಸಿ ಕೂಡಲೇ ಆ ಭಾಗದಲ್ಲಿ ಇರುವ ಒಂದು ಪುಂಡಾನೆಯನ್ನು ಸೆರೆ ಹಿಡಿಯಲು ಬೇಕಾದ ಎಲ್ಲಾ ಇಲಾಖೆ ಕಾನೂನುಗಳನ್ನು ಈಡೇರಿಸಿ, ಶೀಘ್ರದಲ್ಲಿ ಆನೆ ಹಿಡಿಯಲು ಅನುಮತಿ ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು.
ಹಾಗೂ ಕೂಡಲೇ ಆನೆ ಓಡಿಸುವ ಕಾರ್ಯಾಚರಣೆ ಮಾಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದರಲ್ಲದೆ, ಅರಣ್ಯ ಇಲಾಖೆಗೆ ಹೆಚ್ಚು ಸಿಬ್ಬಂದಿ ಒದಗಿಸುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯರಾದ ಆದಮ್ ಕುಂಹಿ, ಪದ್ಮನಾಭ ಮಂಗಳಪ್ಪಾರೆ, ರಘುನಾಥ್ ಬಾಲಂಬಿ, ವಿನಯ ಮಾಣಿಕಲ್ಲು, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ವೈದ್ಯರು ಉಪಸ್ಥಿತರಿದ್ದರು.