ಮಾಲ್ದಾರೆ ಅರಣ್ಯ ಗಡಿಭಾಗಕ್ಕೆ ಡಿಸಿಎಫ್ ಅಭಿಷೇಕ್ ಭೇಟಿ; ಕಾಡಾನೆಗಳ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ

Jun 10, 2026 - 14:36
 0  716
ಮಾಲ್ದಾರೆ ಅರಣ್ಯ ಗಡಿಭಾಗಕ್ಕೆ ಡಿಸಿಎಫ್ ಅಭಿಷೇಕ್ ಭೇಟಿ; ಕಾಡಾನೆಗಳ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ

ಸಿದ್ದಾಪುರ :- ಕುಶಾಲನಗರ ವಲಯದ ಮಾಲ್ದಾರೆ ಅರಣ್ಯ ಗಡಿಭಾಗಕ್ಕೆ ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಅಭಿಷೇಕ್ ಅವರು ಮಂಗಳವಾರ ಖುದ್ದಾಗಿ ಭೇಟಿ ನೀಡಿ ಕಾಡಾನೆಗಳ ಸಂಚಾರ ಹಾಗೂ ಅವುಗಳು ತೋಟ ಪ್ರದೇಶಗಳಿಗೆ ದಾಟುವ ಸ್ಥಳಗಳನ್ನು ಪರಿಶೀಲಿಸಿದರು.

 ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳದಲ್ಲೇ ಸಮಾಲೋಚನೆ ನಡೆಸಿದ ಅವರು, ಕಾಡಾನೆಗಳ ಚಲನವಲನ, ಜನವಸತಿ ಪ್ರದೇಶಗಳಿಗೆ ಆಗುತ್ತಿರುವ ತೊಂದರೆ ಹಾಗೂ ಹಾನಿ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಕಾಡಾನೆಗಳು ತೋಟ ಮತ್ತು ಕೃಷಿ ಪ್ರದೇಶಗಳಿಗೆ ನುಗ್ಗದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಡಾನೆಗಳ ಸಂಚಾರ ಮಾರ್ಗಗಳನ್ನು ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸುವುದರೊಂದಿಗೆ ಸ್ಥಳೀಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು. ಅರಣ್ಯ ಇಲಾಖೆ ವತಿಯಿಂದ ಕಾಡಾನೆ-ಮಾನವ ಸಂಘರ್ಷ ಕಡಿಮೆಗೊಳಿಸಲು ನಿರಂತರ ನಿಗಾ ವಹಿಸಲಾಗುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ತಿತುಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0