Kodagu

ಸಚಿವ ಪ್ರಿಯಾಂಕ್ ಖರ್ಗೆ ಅವರು ಆರಂಭಿಸಿರುವ ಸೈದ್ಧಾಂತಿಕ ಹೋರಾಟಕ್ಕೆ ಡಿಎಸ್‌ಎಸ್ ಸಂಯೋಜಕ ಬಣ ಸಂಪೂರ್ಣ ಬೆಂಬಲ: ಎ.ಎನ್.ರಾಜಪ್ಪ

admincoorgdaily

ಶನಿವಾರಸಂತೆ::-ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹತಾಶೆಯಲ್ಲಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಪ್ರಿಯಾಂಕ್ ಖರ್ಗೆ ಅವರ ಮನೆಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕಿರುವ ಬಿಜೆಪಿ ಮುಖಂಡ ಮಣಿಕಾಂತ್ ರಾಥೋಡ್ ಗೂಂಡಾಗಿರಿ ನಡೆಯನ್ನು ಡಿಎಸ್‌ಎಸ್ ಸಂಯೋಜಕ ಬಣ ಖಂಡಿಸುತ್ತದೆ ಎಂದು ದಸಂಸ ಸಂಯೋಜಕ ಬಣದ ಜಿಲ್ಲಾ ಸಂಚಾಲಕ ಎಂ.ಎ.ರಾಜಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

ದೇಶದ ಕಾನೂನಿನಲ್ಲಿ ಅನ್ವಯ ನೋಂದವಣಿ ಆಗದೆ ಇರುವ ಆರ್‌ಎಸ್‌ಎಸ್ ಸರ್ಕಾರಿ, ಅನುದಾನಿತ ಶಾಲಾ ಕಾಲೇಜು ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರವಾದ ದೊಣ್ಣೆ ಹಿಡಿದು ಪಥಸಂಚಲನ ಸೇರಿದಂತೆ ಇನ್ನಿತರ ಜನವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ ತ್ರಿವರ್ಣ ಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನವನ್ನು ಒಪ್ಪದ ಆರ್‌ಎಸ್‌ಎಸ್ ಹಿಂದುತ್ವದ ಹೆಸರಲ್ಲಿ ಜನರ ಮನಸಿನಲ್ಲಿ ಜಾತೀಯತೆ, ಮತೀಯತೆ ಮೌಡ್ಯತೆ ಮೂಢನಂಬಿಕೆಗಳ ವಿಷಬೀಜ ಬಿತ್ತುತ್ತಿದೆ ಎಂದರು. ಆರ್‌ಎಸ್‌ಎಸ್ ಎಂದೂ ದಲಿತರ ಪರ ಸಮಾನತೆಯ ಪರ, ಸಮಾಜದ ಪರ, ಸಹೋದರತೆ ಪರ ಹೋರಾಟ ಮಾಡಿಲ್ಲ ಕೇವಲ ಒಂದೆ ಧರ್ಮದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾ ಸಮಾಜದಲ್ಲಿ ಕೋಮು ಹಿಂಸಾ ಕೃತ್ಯಗಳಿಗೆ ಪ್ರೇರಿಪಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್ ಮಾತನಾಡಿ,ಸಂವಿಧಾನದಲ್ಲಿ ಸಮಾಜದಲ್ಲಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ಇದೆ.ಇವುಗಳನ್ನು ಕಾನೂನಾತ್ಮಕವಾಗಿ ನೋಂದವಣೆ ಮಾಡಿಸುತ್ತಾರೆ.ಆದರೆ ಆರ್‌ಎಸ್‌ಎಸ್ ನೋಂದವಣೆ ಮಾಡಿಸದಿರುವ ಬಗ್ಗೆ ಮತ್ತು ಈ ಸಂಘಕ್ಕೆ ಎಲ್ಲಿಂದ ಹಣ ಬರುತ್ತದೆ ಎಂಬುವುದರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸೈದ್ಧಾಂತಿಕವಾಗಿ ಪ್ರಶ್ನಿಸಿದ್ದಾರೆ ಆದರೆ ಈ ಕುರಿತು ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಸ್ಪಷ್ಟನೆ ನೀಡಲು ಸಾಧ್ಯವಾಗದೆ ಸಚಿವರಿಗೆ ಬೆದರಿಕೆ ಹಾಕಿದ್ದಾರೆ ನಾವು ದೇಶ ರಕ್ಷಣೆಗಾಗಿ ಪಥಸಂಚಲನ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ, ಆರ್‌ಎಸ್‌ಎಸ್ ಸಚಿವರಿಗೆ ಮತ್ತು ಸರಕಾರಕ್ಕೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಇ.ಪೊನ್ನಪ್ಪ, ಜಿಲ್ಲಾ ಸಂಚಾಲಕ ಎಚ್.ಸಿ.ರಾಜಪ್ಪ, ತಾಲ್ಲೂಕು ಸಂಚಾಲಕ ಚಂದ್ರಶೇಖರ್, ಜಿಲ್ಲಾ ಖಜಾಂಜಿ ವೀರಭದ್ರ ಹಾಜರಿದ್ದರು.