ಕಲ್ಯಾಣ ಕ್ರಾಂತಿಯ ಬಳಿಕ ಕಣ್ಮರೆಯಾದ ವಚನ ಸಾಹಿತ್ಯವನ್ನು ಸಂಗ್ರಹಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ: ಕೆ.ಎಸ್.ಮೂರ್ತಿ

ಕಲ್ಯಾಣ ಕ್ರಾಂತಿಯ ಬಳಿಕ ಕಣ್ಮರೆಯಾದ ವಚನ ಸಾಹಿತ್ಯವನ್ನು ಸಂಗ್ರಹಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ: ಕೆ.ಎಸ್.ಮೂರ್ತಿ

ಮಡಿಕೇರಿ ಜು.2:-ಕಲ್ಯಾಣ ಕ್ರಾಂತಿಯ ಬಳಿಕ ಕಣ್ಮರೆಯಾದ ವಚನ ಸಾಹಿತ್ಯವನ್ನು ಸಂಗ್ರಹಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯ ಅವಿಸ್ಮರಣೀಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಮೂರ್ತಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಗಾಂಧಿ ಭವನದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆ (ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ) ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಚನ ಸಾಹಿತ್ಯವು 12ನೇ ಶತಮಾನದ ಶರಣರ ಚಿಂತನೆ, ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಭಂಡಾರವಾಗಿದೆ. ವಿದ್ಯಾರ್ಥಿಗಳು ವಚನಗಳನ್ನು ಮೈಗೂಡಿಸಿಕೊಳ್ಳಬೇಕು. ದಿನಕ್ಕೆ ಒಂದು ವಚನಗಳನ್ನಾದರೂ ಕಲಿತು ಅದರ ಮೆರುಗನ್ನು ಬದುಕಿನಲ್ಲಿ ಅನುಸರಿಸಬೇಕು ಎಂದು ಸಲಹೆ ನೀಡಿದರು. 

ಡಾ.ಫ.ಗು.ಹಳಕಟ್ಟಿ ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಚನ ಸಾಹಿತ್ಯದ ಅಧ್ಯಯನದಿಂದ ಅರಿವು ಜಾಗೃತಗೊಂಡು, ಬೆಳಕು ಮೂಡುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಶಿವಪ್ಪ ಅವರು, ಬಸವಾದಿ ಶರಣರು ರಚಿಸಿದ ವಚನಗಳು ಜಗತ್ತಿನಲ್ಲಿಯೇ ವಿಶಿಷ್ಟ ಹಾಗೂ ಅನನ್ಯ ಸಾಹಿತ್ಯವಾಗಿದೆ. 12ನೇ ಶತಮಾನದ ಶರಣರ ಪ್ರಮುಖ ವಚನಗಳನ್ನು ತಾಳೆಗರಿಗಳಿಂದ ಕಷ್ಟಪಟ್ಟು ಸಂಗ್ರಹಿಸಿ, ಸಂಪಾದಿಸಿ ಇಂದಿನ ಪೀಳಿಗೆಗೆ ತಲುಪಿಸಿದ ಡಾ|| ಫ.ಗು. ಹಳಕಟ್ಟಿ ಅವರ ಅಪಾರ ಸೇವೆಯನ್ನು ಸ್ಮರಿಸಿದರು. ಅವರ ನಿರಂತರ ಪರಿಶ್ರಮವಿಲ್ಲದಿದ್ದರೆ ಇತಿಹಾಸದ ಅಮೂಲ್ಯ ವಚನ ಸಂಪತ್ತು ನಮಗೆ ಸಿಗುತ್ತಿರಲಿಲ್ಲ ಎಂದು ಹಳಕಟ್ಟಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ವಚನಗಳಲ್ಲಡಗಿರುವ ಜಾತ್ಯಾತೀತ ಹಾಗೂ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಹೋಬಳಿ ಅಧ್ಯಕ್ಷರಾದ ಎಂ.ಎಸ್.ಮೂರ್ತಿ ಅವರು ಉಪನ್ಯಾಸ ನೀಡಿ, ಬಸವಾದಿ ಶರಣರ ವಚನಗಳನ್ನು ಆಧುನಿಕ ಕಾಲದಲ್ಲಿ ಜನಮನಕ್ಕೆ ತಲುಪಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಫ.ಗು.ಹಳಕಟ್ಟಿ ಅವರು ಕನ್ನಡದ ಸಾರಸತ್ವ ಲೋಕದ ಅಪ್ರತಿಮ ಸಂಶೋಧಕರು, ವಿದ್ವಾಂಸರು, ವಕೀಲರು ಹಾಗೂ ಸಹಕಾರ ಚಳುವಳಿಯ ಪ್ರವರ್ತಕರು ಆಗಿದ್ದರು. 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಮಹತ್ವ ಹೆಚ್ಚು ಜನರಿಗೆ ತಿಳಿಯಿತು ಎಂದರು.

ಹಳಕಟ್ಟಿ ಅವರ ಬದುಕು, ಸಾಧನೆ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು, ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಹಾಗೂ ಸಂಸ್ಕøತಿಯನ್ನು ತಿಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಪುಟ್ಟರಾಜು ಅವರು ವಚನ ಗಾಯನ ಹಾಡಿದರು.

ಮಡಿಕೇರಿ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷರಾದ ವಿಜಯಲಕ್ಷ್ಮಿ, ಮಡಿಕೇರಿ ತಾಲ್ಲೂಕು ಶಿರಸ್ಥೆದಾರರಾದ ದೇವರಾಜು, ಕುಶಾಲನಗರ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷರಾದ ಶಾಂಭಶಿವಮೂರ್ತಿ, ಬ್ಲಾಸಂ ಶಾಲೆಯ ಶಿಕ್ಷಕಿ ಸರೀನ, ವಿದ್ಯಾರ್ಥಿಗಳು ಇದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಅವರು ಸ್ವಾಗತಿಸಿದರು. ಮಣಜೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.