ಆದಿವಾಸಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಸಮುದಾಯದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಿ:ಪಿ.ಕೆ ಸಿದ್ದಪ್ಪ ಆಗ್ರಹ

ಆದಿವಾಸಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಸಮುದಾಯದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಿ:ಪಿ.ಕೆ ಸಿದ್ದಪ್ಪ ಆಗ್ರಹ

ಮಡಿಕೇರಿ: ರಾಜ್ಯದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಬುಡಕಟ್ಟು ಆದಿವಾಸಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಸಮುದಾಯದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ನಿಯಮಗಳಲ್ಲಿ ಸಡಿಲಿಕೆ ನೀಡಬೇಕು ಎಂದು ಬುಡಕಟ್ಟು ಕೃಷಿಕರ ಸಂಘದ ವಿರಾಜಪೇಟೆ ತಾಲೂಕು ಉಪಾಧ್ಯಕ್ಷ ಪಿ.ಕೆ.ಸಿದ್ಧಪ್ಪ ಆಗ್ರಹಿಸಿದರು.

 ಸರ್ಕಾರ 2025-26ನೇ ಸಾಲಿನಿಂದ ಆಯ್ದ ಆಶ್ರಮ ಶಾಲೆಗಳಲ್ಲಿ 12ನೇ ತರಗತಿವರೆಗೆ ಶಿಕ್ಷಣವನ್ನು ಮೇಲ್ದರ್ಜೆಗೇರಿಸುವ ತೀರ್ಮಾನ ಕೈಗೊಂಡಿದೆ. ಜತೆಗೆ ಟಿಇಟಿ ಪರೀಕ್ಷೆ ಉತ್ತೀರ್ಣರಾಗಿರಬೇಕು ಎಂದು ತಿಳಿಸಿದೆ. ಈ ಆಶ್ರಮ ಶಾಲೆಗಳಿಗೆ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳನ್ನು ನೇರ ನೇಮಕಾತಿ ಮಾಡಲಾಗುತ್ತಿದೆ. ಹೊರ ಸಂಪನ್ಮೂಲ ಎಂಬ ವ್ಯವಸ್ಥೆಯಡಿ ನೇಮಕಗೊಂಡ ಶಿಕ್ಷಕರಿಗೆ ಹೊಸ ನಿಯಮಗಳಿಂದ ಅತಂತ್ರ ಸ್ಥಿತಿಗೆ ಸಿಲುಕಿ ಹೊರಬೀಳುವ ಆತಂಕ ಎದುರಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಪ್ರದೇಶಗಳಲ್ಲಿನ ಆದಿವಾಸಿ ಹಾಡಿ, ಕಾಲನಿಗಳಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ ೧೧೯ ಆಶ್ರಮ ಶಾಲೆಗಳಿಗೆ ಸರ್ಕಾರದಿಂದ ಖಾಯಂ ಶಿಕ್ಷಕರನ್ನು ನೇಮಕ ಮಾಡದ ಪರಿಣಾಮ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೊರಗುತ್ತಿಗೆ ಆದಾರದಲ್ಲಿ ೪೫೦ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಈ ಪೈಕಿ ೩೨ ಶಿಕ್ಷಕರು ಕಳೆದ ೧೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಜಿಲ್ಲೆಯ ೧೧ ಶಾಲೆಗಳಲ್ಲಿ ೬ ಆದಿವಾಸಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

 ಆಶ್ರಮ ಶಾಲಾ ಶಿಕ್ಷಕಿ ಪಿ.ಎಸ್.ಲಕ್ಷ್ಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಆಶ್ರಮ ಶಾಲೆಗಳಿಗೆ ಶಿಕ್ಷಕರಾಗಲು ಸರ್ಕಾರದ ಹೊಸ ನಿಯಮದ ಪ್ರಕಾರ ಟಿಇಟಿ ಪರೀಕ್ಷೆ ಉತ್ತೀರ್ಣರಾಗಬೇಕಾಗಿದೆ. ಕೆಲವರು ಉತ್ತೀರ್ಣರಾಗಿದ್ದಾರೆ. ಕೆಲವರು ಆಗಿಲ್ಲ. ಜಿಲ್ಲೆಯಲ್ಲಿ ಖಾಯಂ ಶಿಕ್ಷಕರ ಕೊರತೆಯಿದ್ದು, ಈ ಸಂದರ್ಭದಲ್ಲಿ ಸರ್ಕಾರದ ನಿಯಮ ಸಮಸ್ಯೆಗೆ ಸಿಲುಕಿಸಲಿದೆ. ಆದ್ದರಿಂದ ಮೇಲ್ದರ್ಜೆಗೇರಿಸುವ ಆಶ್ರಮ ಶಾಲೆಗಳಲ್ಲಿರುವ ವಿವಿಧ ಹುದ್ದೆಗಳಿಗೆ ೩೨ ಶಿಕ್ಷಕರನ್ನು ಅವರ ವಿದ್ಯಾರ್ಹತೆಗೆ ಅನುಗುಣವಾದ ಸಮಾನ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಸೃಜಿಸಿರುವ ಹಾಗೂ ನೇಮಕವಾಗದೆ ಖಾಲಿ ಇರುವ ಹುದ್ದೆಗಳಿಗೆ ನಿಯುಕ್ತಿಗೊಳಿಸಿ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಆಶ್ರಮ ಶಾಲಾ ಶಿಕ್ಷಕರಾದ ಲಕ್ಷ್ಮಿ, ಪಿ.ಎಸ್.ದಿವ್ಯ, ಎಂ.ಪವಿತ್ರ, ವಿರಾಜಪೇಟೆ ಗಿರಿಜನ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಮಣಿಕಂಞ ಉಪಸ್ಥಿತರಿದ್ದರು.