ಜಿಲ್ಲೆಯ‌ ಕ್ರೀಡಾಭಿವೃದ್ದಿಗೆ ಹೆಚ್ಚಿನ ಒತ್ತು; ಶಾಸಕ‌ ಎಎಸ್ ಪೊನ್ನಣ್ಣ

Apr 23, 2026 - 17:12
 0  122
ಜಿಲ್ಲೆಯ‌ ಕ್ರೀಡಾಭಿವೃದ್ದಿಗೆ ಹೆಚ್ಚಿನ ಒತ್ತು; ಶಾಸಕ‌ ಎಎಸ್ ಪೊನ್ನಣ್ಣ

ನಾಪೋಕ್ಲು: ಕೊಡಗು‌ ಜಿಲ್ಲೆಯಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದರೂ ಮೂಲಭೂತ ಸಮಸ್ಯೆಗಳಿಂದ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲದಂತಾಗಿದೆ. ಆದುದರಿಂದ ಕ್ರೀಡಾಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸುವುದಾಗಿ ವಿರಾಜಪೇಟೆ ವಿದಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.

ಸ್ಥಳೀಯ ಕೆಪಿಎಸ್ ಶಾಲಾ ಮೈದಾನದಲ್ಲಿ ಚೀಯಕಪೂವಂಡ ಕುಟುಂಬಸ್ಥರ ವತಿಯಿಂದ ಏರ್ಪಡಿಸಲಾದ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ (ಕೇರ್ ಬಲಿ ನಮ್ಮೆ) ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಕಿ ಮತ್ತು ಕ್ರಿಕೆಟ್ ನಂತೆ ಹಗ್ಗಜಗ್ಗಾಟ ಪಂದ್ಯಾಟವು ಯಶಸ್ವಿಯಾಗಿ 5ನೇ ವರ್ಷಕ್ಕೆ ತಲುಪಿದೆ. ಮುಂದಿನ ವರ್ಷಗಳಲ್ಲಿ ಇದು ಕೂಡ ದಾಖಲೆ ಸೃಷ್ಟಿಸಲಿ ಎಂದು ಹಾರೈಸಿದರು. ಜಿಲ್ಲೆಯ ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ ಅವರು ಪೊನ್ನಂಪೇಟೆಯಲ್ಲಿ ಬಾಲಕ -ಬಾಲಕಿಯರಿಗೆ ವಸತಿ ಶಾಲೆ, ಟರ್ಫ್ ಮೈದಾನದ‌ ನವೀಕರಣ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.

ಅದರೊಂದಿಗೆ ಅಲ್ಲಿನ‌ ಶೌಚಾಲಯ,‌ ನೀರಿನ ಟ್ಯಾಂಕ್ , ಮತ್ತಿತರ ಕಾಮಗಾರಿಗಳಿಗೆ ಸರಕಾರದಿಂದ 3.50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು. ಬಾಡಗ ಗ್ರಾಮದಲ್ಲಿ ಕ್ರೀಡಾ ಸಂಕೀರ್ಣಕ್ಕೆ 11.50 ಏಕರೆ ಜಾಗ ಗುರುತಿಸಲಾಗಿದ್ದು, ಸರಕಾರದಿಂದ 30 ಕೋಟಿ ರೂ., ರಾಜ್ಯಸಭಾ ಸದಸ್ಯರಾದ ಅಜಯ್ ಮೇಕಾನ್ ಅವರ 15 ಕೋಟಿ ರೂ. ಅನುದಾನದಿಂದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

 ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕೊಡವರು ಶೌರ್ಯಕ್ಕೆ ಹೆಸರುವಾಸಿ. ಕೇರ್ ಬಲಿ‌ ನಮ್ಮೆಯಲ್ಲಿ ತಾಕತ್ತು ಪ್ರದರ್ಶನವಾಗುತ್ತದೆ. ಎಲ್ಲಾ ಕ್ರೀಡೆಗಳಿಗೂ ತಾಕತ್ತು ಹಾಗೂ ಜಾಣ್ಮೆ ಬೇಕು. ಕೊಡಗು ಕ್ರೀಡೆಯ ತವರೂರು. ಆದರೆ, ಇಲ್ಲಿ ಕ್ರೀಡಾಭಿವೃದ್ಧಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಇಲ್ಲಿ ಕ್ರೀಡಾ ಸಂಕೀರ್ಣದ ಅವಶ್ಯಕತೆಯಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು‌. ಅಧ್ಯಕ್ಷತೆ ವಹಿಸಿದ‌ ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಸದಸ್ಯ ಚೀಯಕಪೂವಂಡ ಕೆ.ಬೋಪಣ್ಣ ಮಾತನಾಡಿದರು.

ವೇದಿಕೆಯಲ್ಲಿ ಚೀಯಕಪೂವಂಡ ಕುಟುಂಬದ ಪಟ್ಟೆದಾರ ಚಿಟ್ಟಿಯಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಕೆ.ಪಿ.ಎಸ್ ಶಾಲಾ ಪ್ರಾಂಶುಪಾಲೆ ಮೇದುರ ವಿಶಾಲ್, ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್, ಬೊಟ್ಟೋಳಂಡ ಗಣಪತಿ, ಚೆಟ್ಟಂಗಡ ರವಿ ಸುಬ್ಬಯ್ಯ, ಬಾಳೆಕುಟ್ಟಿರ ರಾಯಪ್ಪ ಮಂದಣ್ಣ, ಪೊನ್ನೊಲತಂಡ ಸೋಮಣ್ಣ, ಅಶೋಕ್‌, ಮತ್ತಿತರರು ಇದ್ದರು.

ರಾಷ್ಟ್ರ ಗೀತೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಸ್ವರ ತಂಗಮ್ಮ ಪ್ರಾರ್ಥನೆ, ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಅಪ್ಪಚ್ಚು ಸ್ವಾಗತ , ಮಾಳೇಟಿರ ಶ್ರೀನಿವಾಸ್ ನಿರೂಪಿಸಿ, ಚೀಯಕಪೂವಂಡ ಸುಶ್ಮಾ ಅಯ್ಯಪ್ಪ ವಂದಿಸಿದರು.

ಅದಕ್ಕೂ ಮೊದಲು ಟಗ್ ಆಫ್ ಅಕಾಡೆಮಿ ಹಾಗೂ 5 ವರ್ಷ ಹಗ್ಗಜಗ್ಗಾಟ ಪಂದ್ಯಾಟದ ಉಸ್ತುವಾರಿ ವಹಿಸಿದ ಕುಟುಂಬಗಳ ಧ್ವಜ ಆರೋಹಣ‌ ನೆರವೇರಿಸಲಾಯಿತು. ಈಶ್ವರ ಇಗ್ಗುತ್ತಪ್ಪ ಎ ಮತ್ತು ಈಶ್ವರ ಇಗ್ಗುತಪ್ಪ ಬಿ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಈಶ್ವರ ಇಗ್ಗುತ್ತಪ್ಲ ಎ ತಂಡವು ಜಯಶಾಲಿಯಾಯಿತು.

ಹಗ್ಗಜಗ್ಗಾಟ ಪಂದ್ಯಾಟದ ಪ್ರಯುಕ್ತ ನಾಪೋಕ್ಲು ಪಟ್ಟಣದ ಪೊನ್ನಾಡ್ ಸೂಪರ್ ಮಾರ್ಕೆಟ್ ಬಳಿಯಿಂದ ಪಂದ್ಯಾಟ ನಡೆಯುವ ಕೆಪಿಎಸ್ ಶಾಲಾ ಮೈದಾನದವರೆಗೆ ಚೀಯಕಪೂವಂಡ ಕುಟುಂಬಸ್ಥರು ಸಾಂಪ್ರದಾಯಿಕ ಉಡುಗೆ, ತೊಡುಗೆ, ತಳಿಯಕ್ಕಿ ಬೊಳಕ್, ಓಲಗ ಮೂಲಕ ಮೆರವಣಿಗೆ ನಡೆಸಿ ಎಲ್ಲರ ಗಮನ ಸೆಳೆದರು.

ಮೆರವಣಿಗೆಯಲ್ಲಿ ಚೀಯಕಪೂವಂಡ ಮುತ್ತಪ್ಪ, ಬೋಪಣ್ಣ, ಜೋಯಪ್ಪ, ರಾಜಾ ಸೋಮಯ್ಯ ದುಡಿಕೊಟ್ಟ್ ಪಾಟ್ ಪ್ರದರ್ಶಿಸಿದರು. ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಉಪಾಧ್ಯಕ್ಷ ಚೀಯಕಪೂವಂಡ ಕಟ್ಟಿ ಮಂಜುನಾಥ್, ನವೀನ್ ನಾಚಪ್ಪ, ಸಿ.ಎ.ನಾಚಪ್ಪ, ಸತೀಶ್ ದೇವಯ್ಯ, ಸುನಿಲ್ ಮಾಚಯ್ಯ, ಸಚಿನ್‌ ಮುತ್ತಪ್ಪ, ಪ್ರಕಾಶ್ ಮಂದಣ್ಣ, ಸಚಿನ್ ಪೂವಯ್ಯ, ಶಂಭು ನಂಜಪ್ಪ,‌ ಸೇರಿದಂತೆ ಕುಟುಂಬದ ಎಲ್ಲಾ ಹಿರಿಯರು, ಕಿರಿಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕತ್ತಿಯಾಟ್, ಕೋಲಾಟ್ ನೃತ್ಯಪ್ರದೃರ್ಶನ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0