ನಾಪೋಕ್ಲು ಭಾಗದಲ್ಲಿ ಪುಷ್ಯ ಮಳೆಯ ಆರ್ಭಟ: ಮನೆ ಕುಸಿದು ಮಹಿಳೆ ಪಾರು: ಹಲವೆಡೆ ಹಾನಿ -ನದಿ ನೀರಿನ ಮಟ್ಟದಲ್ಲಿ ಏರಿಕೆ:
(ವರದಿ:ಝಕರಿಯ ನಾಪೋಕ್ಲು)
ನಾಪೋಕ್ಲು :ನಾಪೋಕ್ಲು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಪುಷ್ಯ ಮಳೆಯ ಆರ್ಭಟ ಜೋರಾಗಿದ್ದು ವಿಭಾಗದ ವಿವಿಧೆಡೆ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಮಸ್ಯೆ ಉಂಟಾದರೆ, ಕೋಕೇರಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಮಹಿಳೆ ಪ್ರಾಣಾಪಾಯದಿಂದ ಪಾರದ ಘಟನೆ ನಡೆದಿದೆ.
ನಾಪೋಕ್ಲು ವಿಭಾಗದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದಲ್ಲಿ ಸುರಿದ ಬಾರಿ ಗಾಳಿ ಮಳೆಗೆ ಗ್ರಾಮದ ನಿವಾಸಿ ಚಂಡೀರ ಲವೀನ್ ಎಂಬುವವರ ಮನೆ ಒಂದು ಭಾಗದ ಮೇಲ್ಚಾವಣಿ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.ಮನೆಯೊಳಗಿದ್ದ ಲವೀನ್ ಅವರ ತಾಯಿ ಶಬ್ದ ಕೇಳಿ ಮನೆಯಿಂದ ಹೊರಬಂದ ಸಂದರ್ಭ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದಿದೆ. ಇದರಿಂದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ಮನೆಯ ಅಡುಗೆ ಕೋಣೆ ಸೇರಿದಂತೆ ಮೂರು ಕೋಣೆಯ ಮೇಲ್ಚಾವಣಿ ಕುಸಿದು ಬಿದ್ದು ಮನೆಯೊಳಗಿದ್ದ ಗೃಹಪಯೋಗಿ ವಸ್ತುಗಳು ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಅದರಂತೆ ಕೋಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪವಿರುವ ಪ್ರಯಾಣಿಕರ ಬಸ್ಸು ತಂಗುದಾಣದ ಮೇಲ್ಭಾಗದಲ್ಲಿ ಅಳವಡಿಸಲಾದ ಶೀಟ್ ಗಳು ಶುಕ್ರವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಹಾರಿ ಹೋಗಿ ಹಾನಿಯಾಗಿದೆ.
ಶನಿವಾರ ಮುಂಜಾನೆ ನಾಪೋಕ್ಲುವಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಬೊಳಿಬಾಣೆ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ನಾಪೋಕ್ಲು ಪೊಲೀಸ್ ಠಾಣೆಯ ಪ್ರಕೃತಿ ವಿಕೋಪ ತಂಡದ ಕೊಟ್ಟಮುಡಿ, ಹೊದವಾಡ ಗ್ರಾಮದ ಸದಸ್ಯರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ತೆ ಕಲ್ಪಿಸಿದರು.
ನಾಪೋಕ್ಲು ಬಳಿಯ ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮರಂದೋಡ ಗ್ರಾಮದಿಂದ ಕೆರೆತಟ್ಟುವಿಗೆ ತೆರಳುವ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿದ್ಯುತ್ ಕಂಬಗಳು ದರೆಗುರುಳಿದ ಪರಿಣಾಮ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.ಅದರಂತೆ ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಯ್ಯಂಡಾಣೆಯಿಂದ ಚೇಲಾವರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿ ಕತ್ತಲೆ ಆವರಿಸಿ ಗ್ರಾಮಸ್ಥರು ಸಮಸ್ಯೆ ಅನುಭವಿಸುವಂತಾಗಿದೆ.
ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮದಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದು ಗ್ರಾಮದ ನಿವಾಸಿ ಟಿ. ಎ.ಅಬ್ದುಲ್ ಅಫಿಲ್ ಎಂಬುವವರ ಮನೆಯ ಸಮೀಪದಲ್ಲಿ ಅಳವಡಿಸಲಾಗಿದ್ದ ಬೃಹತ್ ತಡೆಗೋಡೆ ಗ್ರಾಮದಲ್ಲಿ ಶುಕ್ರವಾರ ಸುರಿದ ಬಾರಿ ಗಾಳಿ ಮಳೆಗೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಅಲ್ಲದೆ ತಡೆಗೋಡೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಕಾರ್ ಶೆಡ್ ನ ಶೀಟ್ ಗಳು ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಇದೇ ಗ್ರಾಮದ ಅಬ್ದುಲ್ ರಹ್ಮಾನ್ ಎಂಬುವರ ವಾಸದ ಮನೆಯ ಹಿಂಭಾಗದ ಅಡುಗೆ ಕೋಣೆಯ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಅಳವಡಿಸಲಾದ ಹೆಂಚುಗಳು ಹಾಗೂ ಗೋಡೆ ಕುಸಿದಿದ್ದು ಹಾನಿಯಾಗಿ ನಷ್ಟ ಸಂಭವಿಸಿದೆ.
ಗಾಳಿ ಮಳೆಗೆ ನಾಪೋಕ್ಲು ಎಮ್ಮೆಮಾಡು ಕೂರುಳಿ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯ ಸುಭಾಷ್ ನಗರ ಪೈಸಾರಿ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಸ್ಥಳೀಯರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಮಳೆಯಿಂದ ಹಾನಿಯಾದ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಹಾಯಾ ಗ್ರಾಮದ ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಪೋಕ್ಲು ವಿಭಾಗದಲ್ಲಿ ಪುಷ್ಯ ಮಳೆಯ ಆರ್ಭಟದಿಂದ ಕಾವೇರಿ ನದಿ ಸೇರಿದಂತೆ ವಿಭಾಗದ ಉಪನದಿ, ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ವಿದ್ಯುತ್ ಕಂಬಗಳು ದರೆಗುರುಳಿದ ಪರಿಣಾಮ ನಾಪೋಕ್ಲು ಪಟ್ಟಣ ಸೇರಿದಂತೆ ವಿಭಾಗದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಸೆಸ್ಕ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ವಿದ್ಯುತ್ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮಳೆ ಇದೇ ರೀತಿ ಮುಂದುವರೆದರೆ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿ ನದಿ ದಡದ ಪ್ರದೇಶಗಳಿಗೆ ಪ್ರವಾಹ ಆವರಿಸುವ ಸಾಧ್ಯತೆ ಹೆಚ್ಚಾಗಿದೆ.