ಕೂಡಿಗೆ : ಸರ್ಕಾರಿ ಪಿಯು ಕಾಲೇಜಿನಲ್ಲಿ ಪೋಷಕರ ಸಭೆ; ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೋಷಕ ಸಹಕಾರ ಅಗತ್ಯ ಹಂಡ್ರಂಗಿ ನಾಗರಾಜು
ಕುಶಾಲನಗರ : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ತುಂಬಾ ಅಗತ್ಯವಾಗಿದೆ ಎಂದು ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಹೇಳಿದರು.
ಸಮೀಪದ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪೋಷಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಈ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಎಂಬ ಆಪ್ ನೊಂದಿಗೆ ಮುಖ ಚಹರೆ ಆಧಾರಿತ ಇ ಹಾಜರಾತಿಯನ್ನು ಜಾರಿಗೊಳಿಸಿದ್ದು, ವಿದ್ಯಾರ್ಥಿಗಳು ಗೈರು ಹಾಜರಾಗದೆ ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು ಎಂದು ತಿಳಿಸಿದರು.
ಪ್ರತಿ ತಿಂಗಳು ಕಿರು ಪರೀಕ್ಷೆಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.ಕಾಲೇಜಿನಲ್ಲಿ ವಿಶೇಷ ತರಗತಿಗಳು ಪ್ರಾರಂಭವಾಗಿದ್ದು, ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳನ್ನು ಪೋಷಕರು ಕಳುಹಿಸಿ ಕೊಡಬೇಕು ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದೆ. ಈ ಸಾಲಿನಲ್ಲೂ ಹೆಚ್ಚಿನ ಫಲಿತಾಂಶ ಬರಲು ಎಲ್ಲರೂ ಒಟ್ಟಾಗಿ ಸೇರಿ ಪ್ರಾರಂಭದಿಂದಲೇ ಪ್ರಯತ್ನಿಸೋಣ ಎಂದರು.
2026 27ನೇ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಕ್ರಮದ ಮಾಹಿತಿಯನ್ನು ನಾಗರಾಜು ಪೋಷಕರಿಗೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಪನ್ಯಾಸಕರಾದ ಹನುಮರಾಜು, ಲೀನಟ್, ಫರ್ನಾಂಡಿಸ್, ಸೂಜಿ ತಂಗಚ್ಚನ್, ಎಂ.ಟಿ. ರಮೇಶ್, ಅನುಷಾ, ಗೌತಮಿ, ಆನಂದ್, ರವೀಶ್ ಭಾಗವಹಿಸಿದ್ದರು.ವಿದ್ಯಾರ್ಥಿನಿ ಪ್ರಗತಿ ಬಡಿಗೇರ್ ಪ್ರಾರ್ಥಿಸಿದರು.350ಕ್ಕೂ ಹೆಚ್ಚು ಪೋಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
