ತೆಂಗಿನ ಕಾಯಿ ಕದ್ದಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ: ಮೃತಪಟ್ಟ ವ್ಯಕ್ತಿ
ಚಿಕ್ಕಮಗಳೂರು: ತೆಂಗಿನ ತೋಟದಲ್ಲಿ ತೆಂಗಿನಕಾಯಿ ಕದ್ದಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.ಎಸ್.ಬಿದರೆ ಗ್ರಾಮದ ಗೊಲ್ಲರಹಟ್ಟಿ ನಿವಾಸಿ ಕುಮಾರ್(37) ಮೃತ ವ್ಯಕ್ತಿ. ತೆಂಗಿನ ತೋಟದ ಮಾಲಕ ಚಂದ್ರಪ್ಪ ಮತ್ತು ಮಧು ಬಂಧಿತ ಆರೋಪಿಗಳು.
ಎಸ್.ಬಿದರೆ ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ಚಂದ್ರಪ್ಪ ಅವರ ತೆಂಗಿನ ತೋಟ ಇದ್ದು, ಮಂಗಳವಾರ ಸಂಜೆ ರಸ್ತೆಯಲ್ಲಿ ಹೋಗುತ್ತಿದ್ದ ಕುಮಾರ್ ಅವರಿಗೆ ಮರದಿಂದ ಬಿದ್ದ ತೆಂಗಿನಕಾಯಿಯೊಂದು ಸಿಕ್ಕಿದೆ. ಈ ಕಾಯಿಯನ್ನು ಕುಮಾರ್ ಮುಟ್ಟಿದ್ದನ್ನೇ ನೆಪ ಮಾಡಿಕೊಂಡ ಚಂದ್ರಪ್ಪ ಕುಮಾರ್ ತೆಂಗಿನ ಕಾಯಿ ಕಳವು ಮಾಡಿದ್ದಾನೆಂದು ಆರೋಪಿಸಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಚಂದ್ರಪ್ಪನ ಅಳಿಯ ಮಧು ಎಂಬಾತನೂ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಕುಮಾರ್‌ನನ್ನು ತೋಟದ ಪಕ್ಕದ ಹಳ್ಳದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಸುದ್ದಿ ತಿಳಿದ ಸಂಬಂಧಿಕರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕುಮಾರ್‌ನನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ, ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.