ಮೊಗೇರಾ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ: ಕ್ರೀಡಾಕೂಟಗಳಿಂದ ಸಮುದಾಯದ ಯುವಕ-ಯುವತಿಯರಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ: ಶಾಸಕ ಎಎಸ್ ಪೊನ್ನಣ್ಣ
ಮರಗೋಡು:ಎಸ್ ಕೆ ಎಫ್ ಸಿ ಮರಗೋಡು ರವರು ಆಯೋಜಿಸಿದ ಪ್ರಥಮ ವರ್ಷದ ಮೊಗೇರಾ ಕಪ್ ಫುಟ್ಬಾಲ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜನೆಗೊಂಡ ಪಂದ್ಯಾವಳಿಯಲ್ಲಿ ಮಾತನಾಡಿದ ಶಾಸಕರು, ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಸಿಗುವ ಉದ್ದೇಶದಿಂದ ಪ್ರತಿಯೊಂದು ಸಮುದಾಯದವರು ವಿಶೇಷವಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವುದು ಉತ್ತಮವಾದ ಬೆಳವಣಿಗೆ. ಇದರಿಂದಾಗಿ ಸಮುದಾಯದ ಯುವಕ-ಯುವತಿಯರಿಗೆ ತಮ್ಮ ಸಾಮರ್ಥ್ಯವನ್ನು ಸುಲಭವಾಗಿ ಪ್ರದರ್ಶಿಸುವ ಅವಕಾಶ ಒದಗಿದಂತಾಗುತ್ತದೆ.
ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬರೂ ತಮ್ಮ ಪ್ರತಿಭೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಏರಿಸುವುದರೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಿಶ್ಲೇಷಿಸಿದರು. ಆಯೋಜಕರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಾನ್ಯ ಶಾಸಕರು ಮುಂದಿನ ದಿನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿ ಸಮುದಾಯದ ಏಳಿಗೆಗೆ ಶ್ರಮಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಎಸ್ ಕೆ ಎಫ್ ಸಿ ಮರಗೋಡು ಅಧ್ಯಕ್ಷರು ವಿಜಯ್, ಕೊಡಗು ಮೊಗೇರ ಸೇವಾ ಸಮಾಜ ಅಧ್ಯಕ್ಷರು ಜನಾರ್ದನ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.