ಬಿಳುಗುಂದ ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ: ನೀರಿನ ಸಂರಕ್ಷಣೆಯ ಮಹತ್ವ ಕುರಿತು ಉಪನ್ಯಾಸ
ವಿರಾಜಪೇಟೆ: ಸರಕಾರಿ ಪ್ರೌಢಶಾಲೆ, ಬಿಳುಗುಂದದಲ್ಲಿ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ 2026-27ರ ಅಂಗವಾಗಿ "ನೀರಿನ ಸಂರಕ್ಷಣೆ" ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು.
ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಉಪನ್ಯಾಸ ನೀಡಿ ಮಾತನಾಡಿದ, ವಿರಾಜಪೇಟೆಯ ವೈದ್ಯರು ಹಾಗೂ ಪಕ್ಷಿ ತಜ್ಞ ಡಾ. ನರಸಿಂಹನ್ ಅವರು "ನೀರು ಜೀವದ ಮೂಲ. ಭೂಮಿಯ ಶೇ.71ರಷ್ಟು ಭಾಗ ನೀರಿನಿಂದ ಆವೃತವಾಗಿದ್ದರೂ, ಕುಡಿಯಲು ಯೋಗ್ಯವಾದ ಸಿಹಿನೀರು ಕೇವಲ ಶೇ.2.5ರಿಂದ 3ರಷ್ಟು ಮಾತ್ರ ಲಭ್ಯವಿದೆ. ಜನಸಂಖ್ಯೆ ಹೆಚ್ಚಳ ಹಾಗೂ ಹವಾಮಾನ ವೈಪರೀತ್ಯದಿಂದ ತೀವ್ರ ನೀರಿನ ಅಭಾವ ಎದುರಾಗುತ್ತಿದೆ" ಎಂದು ತಿಳಿಸಿದರು.
ಮಳೆ ನೀರು ಇಂಗಿಸುವುದು, ಹಲ್ಲುಜ್ಜುವಾಗ-ಪಾತ್ರೆ ತೊಳೆಯುವಾಗ ನೀರು ವ್ಯರ್ಥ ಮಾಡದಿರುವುದು, ಸೋರುವ ನಲ್ಲಿಗಳನ್ನು ಸರಿಪಡಿಸುವುದು, ತರಕಾರಿ ತೊಳೆದ ನೀರನ್ನು ಗಿಡಕ್ಕೆ ಬಳಸುವುದು, ಮಳೆಕೊಯ್ಲು ಮತ್ತು ಇಂಗುಗುಂಡಿ ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಿಸುವುದು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. "ಪರಿಸರವನ್ನು ಪ್ರೀತಿಸಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ" ಎಂದು ಕರೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಡಾ. ರವಿ ಅವರು ಮಾತನಾಡಿ, "ನೀರು ಅಮೂಲ್ಯ. ಕಾವೇರಿ ಹುಟ್ಟಿದ ನಾಡಲ್ಲಿ ಬಾಳುತ್ತಿರುವ ನಾವೆಲ್ಲರೂ ಪುಣ್ಯವಂತರು. ಕಾವೇರಿ ನದಿ ಕೊಡಗಿನಿಂದ ಹರಿದು ಮೈಸೂರು, ಮಂಡ್ಯ, ಚಾಮರಾಜನಗರದ ಮೂಲಕ ತಮಿಳುನಾಡಿಗೆ ಸೇರುತ್ತದೆ. ಹಾಗಾಗಿ ಅನಗತ್ಯವಾಗಿ ಹರಿದು ಸಮುದ್ರ ಸೇರುವ ನೀರನ್ನು ತಡೆಹಿಡಿದು ಕೃಷಿಗೆ ಬಳಸುವ ರೀತಿಯನ್ನು ಅಳವಡಿಸಿಕೊಳ್ಳಬೇಕು" ಎಂದು ವಿವರಿಸಿದರು.
ಶಾಲೆಯ ಹಿರಿಯ ಶಿಕ್ಷಕಿ ಅರುಣ ಆನ್ಸಿ ಡಿಸೋಜ, ಸಹ ಶಿಕ್ಷಕಿ ಲೀಲಾವತಿ ವಿ.ಕೆ, ಭವ್ಯ ಪಿ.ಎಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಲಿನು ಎಸ್.ಜೆ, ಅನಿತಾ ಎಸ್.ಡಿ, ಸವಿತಾ ಮಹದೇವ ನಾಯಕ್, ರೂಪ ಲೋಕೇಶ್ ಉಪಸ್ಥಿತರಿದ್ದರು.

