ರಾಷ್ಟ್ರೀಯ ಏಕತಾ ದಿನ: "ಏಕತೆಗಾಗಿ ಓಟ": ಶಾಸಕ ಎಎಸ್ ಪೊನ್ನಣ್ಣ ಭಾಗಿ
ವಿರಾಜಪೇಟೆ; ರಾಷ್ಟ್ರೀಯ ಏಕತಾ ದಿನ ಆಚರಣೆಯ ಪ್ರಯುಕ್ತ, "ಏಕತೆಗಾಗಿ ಓಟ 2025" ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಕೊಡಗು ಜಿಲ್ಲಾ ಪೊಲೀಸ್ ವಿರಾಜಪೇಟೆ ಉಪ ವಿಭಾಗ, ವಿರಾಜಪೇಟೆ ವೃತ್ತ, ವಿರಾಜಪೇಟೆ ನಗರ ಠಾಣೆ ಹಾಗೂ ವಿರಾಜಪೇಟೆ ಗ್ರಾಮಾಂತರ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಏಕತೆಗಾಗಿ ಓಟ 2025 ಕಾರ್ಯಕ್ರಮವನ್ನು ಉದ್ಘಾಟಿಸಿ, ತಾಲೂಕು ಮೈದಾನದಿಂದ ವಿರಾಜಪೇಟೆ ನಗರದಾದ್ಯಂತ ಕಾಲ್ನಡಿಗೆ ಮೂಲಕ ಆಯೋಜಕರೊಂದಿಗೆ ಹೆಜ್ಜೆ ಹಾಕಿದ ಶಾಸಕರು ಏಕತೆಯ ಸಂದೇಶ ಸಾರಿದರು. ಬಳಿಕ ಮಾತನಾಡಿದ ಶಾಸಕರು, ಭಾರತದ ಸಾರ್ವಭೌಮತೆ ಉಳಿಸಿಕೊಳ್ಳಲು ದೇಶದ ನಾಗರೀಕರಲ್ಲಿ ಏಕತೆ ಭಾವನೆ ಅತೀ ಮುಖ್ಯವಾಗಿದೆ. ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯ ಹೋರಾಟಗಾರರು ನಮಗೆ ತಂದುಕೊಟ್ಟ ಸ್ವತಂತ್ರ ಭಾರತದ ಸ್ವರ್ಣ ಯುಗವನ್ನು ಮುಂದುವರಿಸಲು ಪ್ರತಿಯೊಬ್ಬ ಭಾರತೀಯನು ಒಗ್ಗಟ್ಟಾಗಿ ಇರುವುದು ಅತಿ ಅವಶ್ಯಕವಾಗಿದೆ.
ದೇಶದ ವಿಷಯ ಬಂದ ಸಂದರ್ಭದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ದೇಶದ ಪ್ರಜೆಗಳಾದ ನಮ್ಮೊಳಗೆ ಮೂಡಬಾರದು ಎಂಬ ಸದುದ್ದೇಶದಿಂದ ಹಾಗೂ ಏಕತೆಯ ಸಂದೇಶವನ್ನು ಸಾರಲು ಪೊಲೀಸ್ ಇಲಾಖೆಯವರು ಕೈಗೊಂಡ ಈ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದಿದೆ. ಶಿಸ್ತು, ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆಗೆ ಹೆಸರಾಗಿರುವ ನಮ್ಮ ಪೊಲೀಸರು ಸಮಾಜದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಲು ಸದಾ ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು.