ಲೇಖಕ ಹೇಮಂತ್ ಪಾರೇರ ರಚಿಸಿರುವ "ಶಕುನದ ಹಕ್ಕಿ" ಕಾದಂಬರಿ ಬಿಡುಗಡೆ

ಲೇಖಕ ಹೇಮಂತ್ ಪಾರೇರ ರಚಿಸಿರುವ "ಶಕುನದ ಹಕ್ಕಿ" ಕಾದಂಬರಿ  ಬಿಡುಗಡೆ

ಮಡಿಕೇರಿ: ಲೇಖಕ ಹೇಮಂತ್ ಪಾರೇರ ರಚಿಸಿರುವ ಶಕುನದ ಹಕ್ಕಿ ಕಾದಂಬರಿ ನಗರದಲ್ಲಿ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಕಾದಂಬರಿಯನ್ನು ಬಿಡುಗಡೆಗೊಳಿಸಿದರು. 

ನಂತರ ಮಾತನಾಡಿದ ಅವರು ಗ್ರಾಮೀಣ ಸೊಗಡನ್ನು ಪ್ರೀತಿಸುವ ಕಾದಂಬರಿಗಳು ಹೆಚ್ಚು ಹೆಚ್ಚು ಬರಬೇಕು ಎಂದರು.

ಶಕುನದ ಹಕ್ಕಿ ಕಾದಂಬರಿ ಗ್ರಾಮೀಣ ಜನರ ಜೀವನ, ಜನರ ಭಾವನೆ, ಶಕುನದ ಹಕ್ಕಿಯ ಕುರಿತು ಗ್ರಾಮೀಣ ಜನರಲ್ಲಿ ಇಂದಿಗೂ ಇರುವ ಆತಂಕ, ಹೆದರಿಕೆ, ಆಗುಹೋಗುಗಳು, ರಂಜನೆಗಳನ್ನು ಕಾದಂಬರಿ ಕಟ್ಟಿಕೊಡುತ್ತದೆ. ಹೀಗಾಗಿ ಪುಸ್ತಕಕ್ಕೆ "ಶಕುನದ ಹಕ್ಕಿ" ಎಂದು ಹೆಸರಿಡಲಾಗಿದೆ. 

ಹಿರಿಯ ಸಾಹಿತಿ ಭಾರದ್ವಾಜ ಕೆ.ಆನಂದ ತೀರ್ಥ ಅವರು ಮಾತನಾಡಿ, ಕಾದಂಬರಿಯನ್ನು ಓದುಗರ ವಿಮರ್ಶೆಗೆ ಬಿಡಬೇಕು. ಓದುಗರು ಅದನ್ನು ಯಾವ ಕೋನದಿಂದ ನೋಡುತ್ತಾರೆ ಎಂಬುವುದು ಮುಖ್ಯ. ಎಲ್ಲರಿಗೂ ಎಲ್ಲವೂ ಇಷ್ಟವಾಗಬೇಕು ಎಂದೇನು ಇಲ್ಲ. ಕಾದಂಬರಿಯ ವಿಮರ್ಶೆ ಬೆಳವಣಿಗೆ ದೃಷ್ಟಿಯಿಂದ ಲೇಖಕರಿಗೂ ಅನುಕೂಲ ಮಾಡಿಕೊಡುತ್ತದೆ. ಹೇಮಂತ್ ಪಾರೇರ ಅವರು ಮತ್ತಷ್ಟು ಅಧ್ಯಯನ ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯ ಕೃತಿಗಳನ್ನು ರಚಿಸುವಂತಾಗಲಿ ಎಂದು ಹಾರೈಸಿದರು.

ಜಾನಪದ ಪರಿಷತ್ ನ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಹಾಗೂ ಪತ್ರಕರ್ತ ಅನಿಲ್ ಹೆಚ್.ಟಿ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತಿಗಳ ಹಾಗೂ ಬರಹಗಾರರ ಕೊರತೆ ಇದೆ ಎಂಬ ಆರೋಪಗಳಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯಾಸಕ್ತರ ಹಾಗೂ ಬರಹಗಾರರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯ ಕೃತಿಗಳು ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದರು.

"ಶಕುನದ ಹಕ್ಕಿ" ಕಾದಂಬರಿಯಲ್ಲಿ ಹಳ್ಳಿಯ ಬದುಕು ಸುಂದರವಾಗಿ ಚಿತ್ರಣಗೊಂಡಿದೆ. ಹೇಮಂತ್ ಪಾರೇರ ಅವರು ಈಗಾಗಲೇ ಕವನ ಸಂಕಲನಗಳನ್ನು ಹೊರ ತರುವ ಮೂಲಕ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಸಾಹಿತಿ ಸಂಗೀತ ರವಿರಾಜ್ ಅವರು ಮಾತನಾಡಿ, "ಶಕುನದ ಹಕ್ಕಿ" ಕಾದಂಬರಿಯಲ್ಲಿ ಗಟ್ಟಿತನವಿದೆ. ಬರಹವನ್ನು ಕೇವಲ ವರ್ಣನೆಗೆ ಮಾತ್ರವೇ ಸೀಮಿತಗೊಳಿಸದೆ ಸಾಮಾಜಿಕ ಬದ್ಧತೆ, ಕಳಕಳಿಯೂ ಅಡಕವಾಗಿದೆ. ಬರಹವನ್ನು ಒಂದು ಜವಾಬ್ದಾರಿ ಎಂಬುವುದನ್ನು ಲೇಖಕರು ಇಲ್ಲಿ ಮನಗಾಣಿಸಿದ್ದಾರೆ. ಸಮಾಜದ ಕೆಟ್ಟ ವ್ಯವಸ್ಥೆಯನ್ನು ಕಾದಂಬರಿಯಲ್ಲಿ ವಿರೋಧಿಸಲಾಗಿದೆ. ಕಾದಂಬರಿ ಓದುಗರನ್ನು ಕೊನೆಯವರೆಗೂ ಸೆಳೆಯುತ್ತದೆ ಎಂದರು.

"ಶಕುನದ ಹಕ್ಕಿ" ಯ ರಚನೆಕಾರ ಹೇಮಂತ್ ಪಾರೇರ ಅವರು ಮಾತನಾಡಿ, ತಮ್ಮ ಕಣ್ಣ ಮುಂದೆಯೇ ಗ್ರಾಮೀಣ ಭಾಗದಲ್ಲಿ ನಡೆದ ಜೂಜಾಟದ ನೈಜ ಘಟನೆಯನ್ನು ವಸ್ತು ವಿಷಯನ್ನಾಗಿಸಿಕೊಂಡು ಈ ಕಾದಂಬರಿ ರಚನೆಯಾಗಿದೆ ಎಂದು ವಿವರಿಸಿದರು.

 ಈ ಕಾದಂಬರಿಯನ್ನು ತಮ್ಮ ಸಾಹಿತ್ಯ ಗುರುಗಳಾದ ಬಿ.ಜಿ.ಅನಂತಶಯನ ಹಾಗೂ ಭಾರದ್ವಾಜ ಕೆ.ಆನಂದ ತೀರ್ಥ ಕಣಿವೆ ಅವರಿಗೆ ಅರ್ಪಿಸುವುದಾಗಿ ಹೇಳಿದರು.