ಪೆರುಂಬಾಡಿ: ಕೇರಳ ಮೂಲದ ಉದ್ಯಮಿಯ ಮೇಲೆ ಹಲ್ಲೆ ಎಸಗಿ ಹಣ ಕಳ್ಳತನ

ಪೆರುಂಬಾಡಿ: ಕೇರಳ ಮೂಲದ ಉದ್ಯಮಿಯ ಮೇಲೆ ಹಲ್ಲೆ ಎಸಗಿ ಹಣ ಕಳ್ಳತನ
ಹಲ್ಲೆಗೊಳಗಾದ ವ್ಯಕ್ತಿ

ವರದಿ:-ಚೆಪ್ಪುಡಿರ ರೋಷನ್, ಪೊನ್ನಂಪೇಟೆ

ಗೋಣಿಕೊಪ್ಪ: ಗೋಣಿಕೊಪ್ಪ- ಹುಣಸೂರು ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ವ್ಯಕ್ತಿಯೋರ್ವರ ಕಾರನ್ನು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಐವರ ತಂಡ ಹಲ್ಲೆ ಎಸಗಿ, ಹಣ ಹಾಗೂ ಪರ್ಸ್ ಕಸಿದುಕೊಂಡು ಪರಾರಿಯಾದ ಘಟನೆ ಪೆರುಂಬಾಡಿ ಚೆಕ್ ಪೋಸ್ಟ್ ನಿಂದ ಮುಂದೆ ಬಾಳುಗೋಡುವಿನ ಮಾತಾ ಪೆಟ್ರೋಲ್ ಬಂಕ್ ನಿಂದ ಮುಂದಿನ ತಿರುವಿನಲ್ಲಿ ನಡೆದಿದೆ.

ಕೇರಳದ ವಡಗರ ಜಿಲ್ಲೆಯ ತೆಕ್ಕೆಕೊಯ್ಲತ್, ಹೌಸ್ ಹರಿಕ್ಕಿಲಾಡ್ ಗ್ರಾಮದ ಹೋಟೆಲ್, ಹಾಗೂ ಬಟ್ಟೆ ಉದ್ಯಮಿ ಅಪ್ಪಸ್ ಎಂಬುವವರೇ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಬುಧವಾರ ಬೆಳಿಗ್ಗೆ ಸುಮಾರು 11.30ರ ಸಮಯದಲ್ಲಿ ಕೇರಳದಿಂದ ದೀಪಾವಳಿ ಹಬ್ಬದ ಪ್ರೆಯುಕ್ತ ತನ್ನ ಹೋಟೆಲ್ ಹಾಗೂ ಬಟ್ಟೆ ಅಂಗಡಿಗೆ ಸಾಮಾಗ್ರಿ ಖರೀದಿಸಲು ಅಪ್ಪಸ್ ಎಂಬುವರು ತನ್ನ ಕೆಎಲ್ 11 ಬಿಕೆ 9703 ಬ್ರೇಜ್ಜಾ ಕಾರಿನಲ್ಲಿ ಗೋಣಿಕೊಪ್ಪ, ಹುಣಸೂರು ಮಾರ್ಗವಾಗಿ ಮೈಸೂರಿಗೆ ತೆರಳುತಿದ್ದ ಸಂದರ್ಭ ಪೆರುಂಬಾಡಿ ಚೆಕ್ ಪೋಸ್ಟ್ ನಿಂದ ಮುಂದೆ ಬಾಳುಗೋಡುವಿನ ಮಾತಾ ಪೆಟ್ರೋಲ್ ಬಂಕ್ ನಿಂದ ಮುಂದಿನ ತಿರುವಿನಲ್ಲಿ OU ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ವ್ಯಾಗನರ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಐದು ಮಂದಿಯ ತಂಡ ಅಪ್ಪಸ್ ಅವರ ಕಾರನ್ನು ತಡೆದು ಕಬ್ಬಿಣದ ರಾಡ್, ಹಾಗೂ ದೊಣ್ಣೆಯಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಿ ಗಾಯಗೊಳಿಸಿ, ಜೇಬಿನಲ್ಲಿದ್ದ 10,400 ರೂಪಾಯಿ ಹಾಗೂ ಪರ್ಸ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

 ಈ ಸಂದರ್ಭ ಪೊನ್ನಂಪೇಟೆ ಗೋಣಿಕೊಪ್ಪ ಬೈಪಾಸ್ ರಸ್ತೆಯ ಜಂಕ್ಷನ್ ನಲ್ಲಿ ಓರ್ವ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪ್ರದೀಪ್ ಕುಮಾರ್ ಸಿಬ್ಬಂದಿಗಳಾದ ಸತೀಶ್, ಲೋಕೇಶ್, ಸಜ್ಜನ್ ತನುಕುಮಾರ್, ವಿರಾಜಪೇಟೆ ಗ್ರಾಮಾಂತರ ಕ್ರೈಮ್ ಠಾಣಾಧಿಕಾರಿ ಬಿ. ಎಸ್ ವಾಣಿ, ಅಬ್ದುಲ್ ಮಜೀದ್, ಹೇಮಂತ್, ಪ್ರಮೀಳಾ, ಪೊನ್ನಂಪೇಟೆ ಠಾಣಾಧಿಕಾರಿ ಜಿ. ನವೀನ್, ಬಾಳಪ್ಪ, ಘಟನಾ ಸ್ಥಳ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.