ಪೊನ್ನಂಪೇಟೆ:ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಎ.ಎಸ್ ಪೊನ್ನಣ್ಣ
ಪೊನ್ನಂಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊನ್ನಂಪೇಟೆ ತಾಲೂಕಿನ ಪ್ರವಾಸದಲ್ಲಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಮಳೆ ಹಾನಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿ, ಬೇಗೂರಿಗೆ ಭೇಟಿ ನೀಡಿದ ಶಾಸಕರು ಮೊದಲಿಗೆ ತೀವ್ರ ಮಳೆಯಿಂದ ಹಾನಿಗೀಡಾಗಿ ಕುಸಿದಿದ್ದ ಸೇತುವೆಯ ವೀಕ್ಷಣೆಯನ್ನು ಮಾಡಿದರು. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಇದರ ದುರಸ್ತಿಯ ಬಗ್ಗೆ ಕೂಡಲೇ ವರದಿ ನೀಡುವಂತೆ ಸೂಚಿಸಿದರು. ಬಳಿಕ ಇದೆ ವ್ಯಾಪ್ತಿಯಲ್ಲಿ ಹಾಲಿಗೀಡಾದ ರಸ್ತೆ ಹಾಗೂ ಇದರಿಂದಾಗಿ ರಸ್ತೆಯು ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿದ ಶಾಸಕರು, ಇದರ ಬಗ್ಗೆ ವರದಿಯನ್ನು ನೀಡಿ ವೈಜ್ಞಾನಿಕವಾಗಿ ಇದರ ದುರಸ್ತಿ ಕಾರ್ಯಕ್ಕೆ ಯಾವುದೆಲ್ಲ ಕ್ರಮ ಕೈಗೊಳ್ಳಬೇಕೆಂಬ ಮಾಹಿತಿಯನ್ನು ನೀಡುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ಕೆ ಬಾಡಗ ಪಂಚಾಯತಿ ಸದಸ್ಯರಾದ ಬೋಪಣ್ಣ, ಅಪ್ಪಣ್ಣ, ಪಕ್ಷದ ಪ್ರಮುಖರು,ಸ್ಥಳೀಯರು ಉಪಸ್ಥಿತರಿದ್ದರು.