Kodagu

ಏಲಕ್ಕಿ,ಕಾಫಿ ಬೆಳೆಗಳನ್ನು ನಾಶ‌ ಪಡಿಸಿರುವ ಅರಣ್ಯ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ

admincoorgdaily

ಮಡಿಕೇರಿ: ಮುಕ್ಕೋಡ್ಲು ಗ್ರಾಮದ ಸರ್ವೆ ನಂಬರ್ ೩೩/೨ರಲ್ಲಿ ೨ ಎಕರೆ ಜಾಗದಲ್ಲಿ ಬೆಳೆಗಾರ ಕಾಳಚಂಡ ನಾಣಿಯಪ್ಪ ಅವರು ಬೆಳೆದ ಏಲಕ್ಕಿ, ಕಾಫಿ ಬೆಳೆಗಳನ್ನು ನಾಶ ಮಾಡಿದ ಅರಣ್ಯ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ಮತ್ತು 30 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ‌ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿದರು.

 ಈ ಸಂದರ್ಭ‌ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ಬೆಳೆಗಾರ ಕಾಳಚಂಡ ನಾಣಿಯಪ್ಪ ಅವರು ತಮ್ಮ ತಂದಯ ಕಾಲದಿಂದಲೂ ವಾಸವಿದ್ದು, ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಏಲಕ್ಕಿ, ಕಾಫಿ ಬೆಳೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮೌಕಿಕವಾಗಿ ಇದು ದೇವರಕಾಡು ಜಾಗ ಎಂದು ಕಾರಣ ಹೇಳಿ ಏಕಾಏಕಿ ನಾಶ ಪಡಿಸಿರುವುದು ಸರಿಯಲ್ಲ. ಇಂತಹ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಂಡು ವಜಾಗೊಳಿಸುವಂತೆ ಆಗ್ರಹಿಸಿದರು. ಯಾವುದೇ ಪೈಸಾರಿ ಜಾಗವಿದ್ದರೂ ಸರ್ವೆ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಜಂಠಿ ಆಶ್ರಯದಲ್ಲಿ ಸರ್ವೆಕಾರ್ಯ ನಡೆಸಲು ಹೈಕೋರ್ಟ್ ಆದೇಶ ನೀಡಿದೆ. ಆದರೆ, ಇದನ್ನು ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ದೂರಿದರು.

ಸಂತ್ರಸ್ತ ರೈತ ಕಾಳಚಂಡ ನಾಣಿಯಪ್ಪ ಮಾತನಾಡಿ, ಜೀವನಕ್ಕೆ ಏಲಕ್ಕಿ, ಕಾಫಿ ಜೀವನಾಧಾರವಾಗಿತ್ತು. ಈಗ ಅದನ್ನೇ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಶಪಡಿಸಿದ್ದಾರೆ. ಪರಿಣಾಮ ಜೀವನಕ್ಕೆ‌ ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡರು. ಈ ಸಂದರ್ಭ 200ಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು‌ ಪಾಲ್ಗೊಂಡಿದ್ದರು.