ಸಂತ ಅನ್ನಮ್ಮ ಕಾಲೇಜು : ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪುಸ್ತಕ ಬಿಡುಗಡೆ

ಸಂತ ಅನ್ನಮ್ಮ ಕಾಲೇಜು : ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪುಸ್ತಕ ಬಿಡುಗಡೆ

ವಿರಾಜಪೇಟೆ : ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಜಿಲ್ಲೆಯ ವಿದ್ಯಾರ್ಥಿಗಳು ಕೂಡ ಪದವಿ ಪೂರ್ವ ಶಿಕ್ಷಣದ ಜೊತೆಜೊತೆಗೆ ಪ್ರಾರಂಭದಲ್ಲಿಯೇ ಸಿ.ಇ.ಟಿ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳು ಕೂಡ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಅವರು ಅಭಿಪ್ರಾಯಪಟ್ಟರು.

 ಪಟ್ಟಣದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು ಹಾಗೂ ಚಾಣಕ್ಯ ಎಜುಕೇಷನ್‌ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ರಚಿಸಿರುವ ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪುಸ್ತಕಗಳನ್ನು ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರಂಭದಲ್ಲಿಯೇ ತಯರಾಗುವುದರಿಂದ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಪಡೆಯುವ ಮೂಲಕ ಮಂಡಳಿಯ ಪರೀಕ್ಷೆಗಳಲ್ಲು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಸಿದ್ಧತೆಯನ್ನು ಕೈಗೊಳ್ಳುತ್ತಿಲ್ಲ. ಇದರಿಂದ ಮಂಡಳಿಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದರೂ, ಸಿ.ಇ.ಟಿ, ಜೆ.ಇ.ಇ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಗಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಉತ್ತಮ‌ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಲಾಗುತ್ತಿಲ್ಲ ಎಂದರು. ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯಲು ಪೈಪೋಟಿ ನಡೆಸಬೇಕಿರುವುದರಿಂದ ಅಗತ್ಯ ತಯಾರಿ ನಡೆಸುವುದು ಇಂದು ಗ್ರಾಮೀಣ ವಿದ್ಯಾರ್ಥಿಗಳಿಗೂ ಅನಿವಾರ್ಯವಾಗಿದೆ. ಐ.ಐ.ಟಿ ಬಾಂಬೆ, ಕಾನ್ಪುರ, ಮದ್ರಸ್, ಧನ್ಬಾದ್ ಯಲ್ಲಿ ಶಿಕ್ಷಣ ಪಡೆದವರು ಸೇರಿದಂತೆ ಖ್ಯಾತ ಲೇಖಕರು ರಚಿಸಿರುವ ಈ ಪುಸ್ತಕಗಳನ್ನು ಚಾಣಕ್ಯ ಎಜುಕೇಶನ್ ಟ್ರಸ್ಟ್ ನ ಸಹಯೋಗದೊಂದಿಗೆ ರೂಪಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ವಿವೇಕ್, ಡಾ. ಹೇಮಂತ್, ಕೃಷ್ಣರಾಜ್, ರಾಜ ರೈ, ಜಹೀರ್ ಸಾಗರ್, ರಶ್ಮಿ, ಮೋಹಾನಾಕ್ಷಿ, ಕ್ರಿಸ್ಟಿನಾ, ಅಶ್ವಿನಿ, ರಮ್ಯ, ತೀರ್ಥ, ಮೋನಿಕಾ ಹಾಗೂ ಚಾಣಕ್ಯ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷೆ ಕವಿತಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.