ಕೂಡುಮಂಗಳೂರು ಸರ್ಕಾರಿ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶಾಲಾ ಆರಂಭೋತ್ಸವ; ಎತ್ತಿನ ಗಾಡಿಯಲ್ಲಿ ಬಂದ ಮಕ್ಕಳಿಗೆ ಪುಷ್ಪ, ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು

Jun 1, 2026 - 16:00
Jun 1, 2026 - 16:03
 0  175
ಕೂಡುಮಂಗಳೂರು ಸರ್ಕಾರಿ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶಾಲಾ ಆರಂಭೋತ್ಸವ;  ಎತ್ತಿನ ಗಾಡಿಯಲ್ಲಿ ಬಂದ ಮಕ್ಕಳಿಗೆ ಪುಷ್ಪ, ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು

ಕುಶಾಲನಗರ, ಜೂನ್ 1: ಉತ್ತರ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗ ಳೂರು(ಕೂಡ್ಲೂರು)ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ( ಜೂನ್ 1 ರಂದು ) ಎಸ್ ಡಿ ಎಂ ಸಿ ಯ ನೇತೃತ್ವದಲ್ಲಿ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ‌ ಶಾಲೆಗೆ ಕರೆದೊಯ್ಯುವ ಮೂಲಕ 2026-27 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.

ಉಭಯ ಶಾಲೆಗಳ ಮಕ್ಕಳು ಕಾಗಧ ಕಲಿಕಾ ಟೋಪಿ ಧರಿಸಿಕೊಂಡು ವಿನೂತನ ರೀತಿಯಲ್ಲಿ ಅಲಂಕೃತಗೊಂಡಿದ್ದ ಎತ್ತಿನ ಗಾಡಿಯ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದ್ದು, ಗ್ರಾಮಸ್ಥರ ಗಮನ ಸೆಳೆಯಿತು.

ಗ್ರಾಮಸ್ಥರು ಮಕ್ಕಳ ಸಂಭ್ರಮಕ್ಕೆ ಸಾಕ್ಷಿಯಾದರು. ಮೊದಲ ದಿನ ಸೋಮವಾರ ಗ್ರಾಮದಲ್ಲಿ ಉಭಯ ಶಾಲೆಯ ವಿದ್ಯಾರ್ಥಿಗಳು ಎತ್ತಿನ ಗಾಡಿಯ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದರು. ಮಕ್ಕಳಿಗೆ ಶಿಕ್ಷಕರು ಹೂವು ಮತ್ತು ಪುಸ್ತಕ ನೀಡುವ ಮೂಲಕ ಸಿಹಿ ವಿತರಿಸಿ ಸ್ವಾಗತಿಸಿ ಶಾಲೆಗೆ ಬರಮಾಡಿಕೊಂಡರು.

ಕೂಡ್ಲೂರು ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿಯಿಂದ ಆರಂಭಗೊಂಡ ಎತ್ತಿನ ಗಾಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ದರು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಈ ಶಾಲೆಗಳ ಸಬಲೀಕರಣಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದರೊಂದಿಗೆ ದ್ವಿಭಾಷ ಮಾಧ್ಯಮದ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲೆಯಲ್ಲಿ 102 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿದ್ದು, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಸೋಮವಾರಪೇಟೆ ತಾಲ್ಲೂಕಿನ 45 ಪ್ರೌಢಶಾಲೆಗಳಲ್ಲಿ .100 ಫಲಿತಾಂಶ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಬಿಇಓ ಕೃಷ್ಣಪ್ಪ ಹೇಳಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸರ್ಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೌಲಭ್ಯದೊಂದಿಗೆ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು.

 ಜಾನಪದ ಕಲಾವಿದ ಭರಮಣ್ಣ ಬೆಟಗೇರಿ ಮಾತನಾಡಿ, ಈ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಶೇ.100 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯವಾದುದು ಎಂದರು. ಬಿಇಓ ಎಂ.ಕೃಷ್ಣಪ್ಪ, ಮುಖ್ಯ ಶಿಕ್ಷಕರಾದ ಟಿ.ಜಿ.ಪ್ರೇಮಕುಮಾರ್, ಎಚ್.ಎಸ್.ಸುಜಾತ , ಶಿಕ್ಷಕರು ಶಾಲಾ ಮಕ್ಕಳಿಗೆ ಪುಷ್ಪ ನೀಡಿ ಸ್ವಾಗತಿಸಿದರು.

ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಸ್.ಹರೀಶ್ ಮಕ್ಕಳಿಗೆ ಸಿಹಿ ವಿತರಿಸಿದರು. ಎಸ್‌ಡಿಎಂಸಿ ಸದಸ್ಯೆ ಹೇಮಾವತಿ ಮಕ್ಕಳಿಗೆ ಆರತಿ ಬೆಳಗಿಸಿ ಸ್ವಾಗತಿಸಿದರು.

ಗ್ರಾಮದ ಹಿರಿಯ ರೈತ ಕೆ.ಎಸ್.ರಾಜಾಚಾರ್, ರಂಗಭೂಮಿ ಕಲಾವಿದ ಭರಮಣ್ಣ. ಬೆಟಗೇರಿ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ ಸದಸ್ಯ ಎಂ.ಎನ್.ಕಾಳಪ್ಪ, ಪ್ರೌಢಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಂ.ಸುಜಾತ, ಶಿಕ್ಷಕರಾದ ಕೆ.ಬಿ.ಗೀತಾರಾಣಿ, ಎ.ಮೇರಿ ಮಾರ್ಗರೇಟ್ , ಜಿ.ನಳಿನಿ, ಎಸ್‌ಡಿಎಂಸಿ ಸದಸ್ಯರಾದ ಪವಿತ್ರ, ಅರ್ಪಿತ, ಸಾಹಿತಿಗಳಾದ ಭಾರದ್ವಾಜ ಕೆ.ಆನಂದತೀರ್ಥ, ಹೇಮಂತ್ ಪಾರೇರ, ಪೋಷಕರು , ಗ್ರಾಮಸ್ಥರು ಇದ್ದರು.

ಮಕ್ಕಳಿಗೆ ಸಿಹಿ ವಿತರಣೆ: ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಸಿಹಿಯೊಂದಿಗೆ ಬಿಸಿಯೂಟ ವಿತರಿಸಲಾಯಿತು. ಮಕ್ಕಳು ಶಾಲಾ ಪ್ರಾರಂಭೋತ್ಸವದಲ್ಲಿ ಸಂಭ್ರಮಿಸಿದರು. ಸರ್ಕಾರಿ ಶಾಲೆಗೆ ಸೇರೋಣ ಬನ್ನಿ, ಸರ್ಕಾರಿ ಶಾಲೆ ನಮ್ಮ ಹೆಮ್ಮೆ, ಸರ್ಕಾರಿ ಶಾಲೆ ನಮ್ಮೂರ ಶಾಲೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸೋಣ ಬನ್ನಿ, ಶಿಕ್ಷಣವೇ ಶಕ್ತಿ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಹಿಡಿದು ಎತ್ತಿನ ಗಾಡಿಯ ಮೂಲಕ ಸಂಭ್ರಮದಿಂದ ಶಾಲೆಗೆ ಆಗಮಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0