ಶ್ರೀ ಭಗೀರಥ ಜಯಂತಿ ಭಗೀರಥ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ: ಚಿ.ನಾ.ಸೋಮೇಶ್

ಶ್ರೀ ಭಗೀರಥ ಜಯಂತಿ ಭಗೀರಥ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ: ಚಿ.ನಾ.ಸೋಮೇಶ್

ಮಡಿಕೇರಿ ಏ.23:-ಕಠಿಣ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ತೋರಿಸಿಕೊಟ್ಟ ಭಗೀರಥ ಅವರ ಪ್ರಯತ್ನ ಮನುಕುಲಕ್ಕೆ ಮಾದರಿಯಾಗಿದೆ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಚಿ.ನಾ.ಸೋಮೇಶ್ ಅವರು ಹೇಳಿದರು.

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಗಂಗೆಯನ್ನು ಧರೆಗಿಳಿಸಿ ಗಂಗಾ ನದಿಯನ್ನಾಗಿಸಿ ಜನರ ನೀರಿನ ದಾಹ ತೀರಿಸಿದ ಭಗೀರಥರು ಪ್ರಯತ್ನ ಶೀಲತೆಯ ರೂಪಕವಾಗಿ ನಿಲ್ಲುತ್ತಾರೆ. ಅತ್ಯಂತ ಕಠಿಣವಾದ ಅಥವಾ ಅಸಾಧ್ಯವೆನಿಸುವ ಕಾರ್ಯವನ್ನು ಅಚಲವಾದ ಛಲ ಮತ್ತು ನಿರಂತರ ಪರಿಶ್ರಮದಿಂದ ಸಾಧಿಸುವ ಭಗೀರಥ ಅವರ ಪ್ರಯತ್ನದ ಮೂಲಕ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

 ಕುಶಾಲನಗರದ ಬಿ.ಸಿ.ಶಂಕರಯ್ಯ ಅವರು ಉಪನ್ಯಾಸ ನೀಡಿ, ಭಗೀರಥನು ಪೌರಾಣಿಕ ರಾಜ. ತನ್ನ ಪೂರ್ವಜರ ಭೀಕರ ಅಂತ್ಯವನ್ನು ತಿಳಿದು, ತನ್ನ ಪೂರ್ವಜರಿಗೆ ಸದ್ಗತಿ ಪ್ರಾಪ್ತಿಯಾಗಲಿಲ್ಲವೆಂಬ ವಿಷಾದದಿಂದ ತನ್ನ ಮಂತ್ರಿಗೆ ತನ್ನ ರಾಜ ಕರ್ತವ್ಯ ವಹಿಸಿ ಹಿಮಾಲಯದಲ್ಲಿ ತಪಸ್ಸಿಗೆ ಹೋದನು ಎಂದು ಹೇಳಲಾಗುತ್ತದೆ. ಗಂಗೆಯು ನೇರವಾಗಿ ಭೂಮಿಗೆ ಇಳಿದರೆ ತನ್ನ ಬಲವು ಭೂಮಿ ನಾಶಪಡಿಸುತ್ತದೆ ಎಂದು ಗಂಗಾ ಭಗೀರಥನಿಗೆ ಹೇಳಿದಳು.

ನೀಲ ಕಂಠನಾದ ಶಿವನ ಬಳಿ ಅನುಗ್ರಹವನ್ನು ಪಡೆಯಲು ಗಂಗೆ ಸಲಹೆಯನ್ನು ಕೊಟ್ಟಳು, ಏಕೆಂದರೆ ಶಿವನನ್ನು ಹೊರತುಪಡಿಸಿ ಯಾರೂ ಸಹ ಗಂಗೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಭಗೀರಥನು ಶಿವನನ್ನು ಕುರಿತು ತೀವ್ರ ತಪಸ್ಸು ಮಾಡಿದನು ಮತ್ತು ಗಂಗೆಯನ್ನು ಭೂಮಿಗೆ ಇಳಿಸುವಂತೆ ಕೇಳಿದನು. ಶಿವನು ಅವನಿಗೆ ವರವನ್ನು ನೀಡಿದನು, ಇದು ಅಂತಿಮವಾಗಿ ಗಂಗಾ ದೇವಿಯು ಗಂಗಾನದಿಯ ರೂಪದಲ್ಲಿ ಭೂಮಿಗೆ ಇಳಿಯಲು ಕಾರಣವಾಯಿತು ಎಂದು ಹೇಳಿದರು.

 ಭಗೀರಥ ಪ್ರಯತ್ನ ಎಂಬುದು ಇಂದಿಗೂ ಮುಂದೆಯೂ ಪ್ರಸ್ತುತ. ಪ್ರತಿಯೊಬ್ಬರು ತಮ್ಮ ಇತಿಹಾಸ, ಪುರಾಣ, ಹಿಂದು ಧರ್ಮಕ್ಕೆ ಗೌರವ ನೀಡಬೇಕು ಎಂದು ಹೇಳಿದರು. ಭಗೀರಥ ಉಪ್ಪಾರ ಸಮಾಜದ ಗೌರವಾಧ್ಯಕ್ಷರಾದ ಬಿ.ಸಿ.ಗೋವಿಂದರಾಜು ಅವರು ಮಾತನಾಡಿ, ಪ್ರಯತ್ನ ಎಂಬುದು ಬಸವಣ್ಣನವರ ತತ್ವ ಕಾಯಕವೇ ಕೈಲಾಸ ಎಂಬಂತೆ. ಪ್ರಯತ್ನ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಉಡುಗೊರೆ. ಅದರಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ಯುವ ಪೀಳಿಗೆ ಪ್ರಯತ್ನಪಟ್ಟರೆ ದೇಶದ ಮುತ್ತುಗಳಾಗಬಹುದು ಎಂದು ಸಲಹೆ ನೀಡಿದರು.

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಅಂಬೇಕಲ್ ನವೀನ್ ಕುಶಾಲಪ್ಪ ಅವರು ಮಾತನಾಡಿ, ಎಲ್ಲಾ ಮಹಾತ್ಮರೂ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಿಶ್ವ ಮಾನವರಾಗಿದ್ದಾರೆ. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಸೇರಿ ಜಯಂತಿ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ ಎಂದು ಅವರು ಹೇಳಿದರು.

 ಉಪ್ಪಾರ ಸಮಾಜದ ಸದಸ್ಯರಾದ ಪೃಥ್ವಿರಾಜ್ ಅವರು ಮಾತನಾಡಿ, ಭಗೀರಥ ಮಹರ್ಷಿ ಅವರು ಅಚಲ ಪ್ರಯತ್ನದಿಂದ ಇಡೀ ಭೂಮಿಯನ್ನೆ ಪಾವನಗೊಳಿಸಿದ್ದಾರೆ. ಭಗೀರಥ ಮಹರ್ಷಿಯ ವಂಶಸ್ಥರೆಂದು ಪರಿಗಣಿಸಲ್ಪಡುವ ಉಪ್ಪಾರ ಸಮಾಜವು ಸಾಂಪ್ರದಾಯಿಕವಾಗಿ ಉಪ್ಪು ತಯಾರಿಕೆ, ಕಲ್ಲು ಕೆಲಸ, ಕೆರೆ ಹೂಳೆತ್ತುವಿಕೆ ಮತ್ತು ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇಂದು ಅತ್ಯಂತ ಹಿಂದುಳಿದ ಸಮುದಾಯವಾಗಿ ಬಂದು ನಿಂತಿದೆ. ಅಲ್ಲದೆ ಸಮುದಾಯದ ಮಂದಿ ವಲಸೆಯಿಂದಾಗಿ ಕಾಲಕ್ರಮೇಣ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಸಮುದಾಯದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಗೀರಥ ಮಹರ್ಷಿ ಅವರ ಜಯಂತಿ ಆಚರಿಸುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜನಾಂಗದ ಅಭಿವೃದ್ಧಿಗೆ ಮುಂದಾಗಬೇಕು.

ಯುವಕರು ಮಹರ್ಷಿಯವರ ತತ್ವ, ಆದರ್ಶಗಳನ್ನು ಆಶಾದೀಪವಾಗಿಟ್ಟುಕೊಂಡು ಮುಂದವರೆಯಬೇಕು ಎಂದರು. ಸಮಾಜದ ಕಾರ್ಯದರ್ಶಿ ಬಿ.ಎನ್.ಜಗದೀಶ್ ಮಾತನಾಡಿ, ಸರ್ಕಾರದ ವತಿಯಿಂದ ಶ್ರೀ ಭಗೀರಥ ಮಹರ್ಷಿ ಅವರ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗರೂಕರಾಗಬೇಕು ಎಂದು ಹೇಳಿದರು. ತಹಶೀಲ್ದಾರರಾದ ಶ್ರೀಧರ್ ಅವರು ಉದ್ಘಾಟಿಸಿದರು.

ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷರಾದ ವಿ.ಗಿರೀಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ಮಡಿಕೇರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಇತರರು ಇದ್ದರು. ಪ್ರೇಮ ಮತ್ತು ಬಿ.ಸಿ.ಶಂಕರಯ್ಯ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಸ್ವಾಗತಿಸಿದರು, ಮಣಜೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಣ್ಯರು ಶ್ರೀ ಮಹರ್ಷಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.