ಅ.11ರಂದು ವಿರಾಜಪೇಟೆಯಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
ವಿರಾಜಪೇಟೆ: ಕೊಡವ ಸಂಘ ಒಕ್ಕೂಟದ ಅಧೀನದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಅಕ್ಟೋಬರ್ 11ರಂದು ವಿರಾಜಪೇಟೆ ಜೂನಿಯರ್ ಕಾಲೇಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾವೇರಿ ಕೊಡವ ಕೇರಿ ಅಪ್ಪಯ್ಯ ಸ್ವಾಮಿ ರಸ್ತೆಯ ಅಧ್ಯಕ್ಷರಾದ ಮೇರಿಯಂಡ ಅರಸು ಅಚ್ಚಮ್ಮ ತಿಳಿಸಿದ್ದಾರೆ.
ನಾಲ್ಕನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಮಿಂಟನ್ ಪಂದ್ಯಾಟ ವಿರಾಜಪೇಟೆ ನಗರದ ಏಳು ಕೊಡವ ಕೇರಿಗಳ ನಡುವೆ ನಡೆಯಲಿದೆ. ಈ ಹಿಂದೆ ಕದನೂರು ಕೊಟ್ಟೋಳಿ ,ಪಂಜರಪೇಟೆ ಕೊಡವಕೇರಿ,ಚಿಕ್ಕ ಪೇಟೆ ಕೊಡವಕೇರಿ ಕುಟುಂಬದ ಸದಸ್ಯರು ಪಂದ್ಯಾಟ ನಡೆಸಿದ್ದು ಈ ಬಾರಿ ವಿರಾಜಪೇಟೆ ಅಪ್ಪಯ್ಯ ರಸ್ತೆಯ ಶ್ರೀ ಕಾವೇರಿ ಕೊಡವ ಕೇರಿ ಕುಟುಂಬದ ಸದಸ್ಯರು ಈ ಪಂದ್ಯಾಟ ನಡೆಸಲಿದ್ದಾರೆ ಎಂದು ತಿಳಿಸಿದರು.
ಅಪ್ಪಯ್ಯ ಸ್ವಾಮಿ ಕೊಡವಕೇರಿಯ ಉಪಾಧ್ಯಕ್ಷ ರಾದ ಅಂಜಪರವಂಡ ಅನಿಲ್ ಮಂದಣ್ಣ ಮಾತನಾಡಿ, ಎಂಟು ವಯಸ್ಸಿನಿಂದ ಎಪ್ಪತ್ತೈದು ವರ್ಷದ ಸದಸ್ಯರು ಪಂದ್ಯಾಟ ದಲ್ಲಿ ಭಾಗವಹಿಸಬಹುದು.ಪಂದ್ಯಾಟವು ಅ.11ರಂದು ಬೆಳಗ್ಗೆ ಎಂಟು ಗಂಟೆಗೆ ಆರಂಭವಾಗಲಿದೆ. ಅ.12ರಂದು ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ಸಂಜೆ ಆರು ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿಜೇತ ತಂಡಕ್ಕೆ ಬಹುಮಾನ ವಿತರಣೆ ಹಾಗೂ ನಾಲ್ಕು ಸದಸ್ಯರಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕರ ಹಾಗೂ ಮುಖ್ಯ ಮಂತ್ರಿ ಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಎಂ ಪಿ.ಸುಜಾ ಕುಶಾಲಪ್ಪ ಅವರ ಆಗಮಿಸಲಿದ್ದಾರೆ ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿಯಾದ ಚೊಟ್ಟೆರ ರವಿ ಬೆಳ್ಯಪ್ಪ ಮಾತನಾಡಿ, ಕೊಡವ ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ, ಸಮನ್ವಯ, ಸಹಕಾರ, ಪರಸ್ಪರ ಪ್ರೀತಿ ವಿಶ್ವಾಸ ವೃದ್ಧಿಸುವ ಸಲುವಾಗಿ ಕ್ರೀಡಾಕೂಟ ಆಯೋಜಿಸಿದ್ದೇವೆ. ನಗರದ ಏಳು ಕೇರಿಗಳ ಕೊಡವ ಕುಟುಂಬದ ಎಲ್ಲಾ ಸದಸ್ಯರು ಆಗಮಿಸಿ ಪಂದ್ಯಾಟದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಡುವಂತೆ ಹಾಗೂ ಅ.10ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡುವಂತೆ ಮನವಿ ಮಾಡಿದರು.