ಸಿದ್ದಾಪುರ: ಎರಡನೇ ಬಾರಿ ಮುರಿದು ಬಿದ್ದ ಕಾಂಕ್ರೀಟ್ ಸ್ಲ್ಯಾಬ್

ಸಿದ್ದಾಪುರ: ಎರಡನೇ ಬಾರಿ ಮುರಿದು ಬಿದ್ದ ಕಾಂಕ್ರೀಟ್ ಸ್ಲ್ಯಾಬ್

ಸಿದ್ದಾಪುರ: ಇಲ್ಲಿಯ ಮೈಸೂರು ರಸ್ತೆಯ ಹೊಸ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಕಾಂಕ್ರೀಟ್ ಸ್ಲ್ಯಾಬ್ ಎರಡನೇ ಬಾರಿಗೆ ಮುರಿದು ಬಿದ್ದಿದೆ. ಮೈಸೂರು ರಸ್ತೆಯಿಂದ ಬಡಾವಣೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಚರಂಡಿಗೆ ಅಡ್ಡಲಾಗಿ ನಿರ್ಮಿಸಿದ ಕಾಂಕ್ರೀಟ್ ಸ್ಲ್ಯಾಬ್ ಕೆಲವು ತಿಂಗಳುಗಳ ಹಿಂದೆ ಮುರಿದು ಬಿದ್ದಿತ್ತು. ಬಳಿಕ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಮತ್ತೊಮ್ಮೆ ಕಾಮಗಾರಿ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಕಾಂಕ್ರೀಟ್ ಸ್ಲ್ಯಾಬ್ ಮುರಿದು ಬಿದ್ದಿರುವುದರಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಹಾಗೂ ಉಪಾಧ್ಯಕ್ಷ ಪಳನಿ ಸ್ವಾನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಂಕ್ರೀಟ್ ಸ್ಲ್ಯಾಬ್ ಮಾರ್ಗವಾಗಿ ಮನೆ ನಿರ್ಮಾಣದ ಬಾರಿ ಗಾತ್ರದ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಸ್ಲ್ಯಾಬ್ ಮುರಿದು ಬಿದ್ದಿದ್ದು, ಗುತ್ತಿಗೆದಾರರ ಜೊತೆ ಚರ್ಚಿಸಿ ಸರಿಪಡಿಸಲಾಗುವುದು ಎಂದು ಪಿಡಿಓ ವಿಶ್ವನಾಥ್ ಪತ್ರಿಕೆಗೆ ತಿಳಿಸಿದರು.