ಗುರು ಎಂಬ ಗುರುತ್ವಾಕರ್ಷಣ ಶಕ್ತಿ
ಲೇಖನ:ರುದ್ರಜ ಕಾನ್ಕೆ, ಸಹಾಯಕ ಪ್ರಾಧ್ಯಾಪಕರು,ವಿರಾಜಪೇಟೆಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಶಿಕ್ಷಕ ವೃತ್ತಿ ಬರೀ ವೃತ್ತಿಯಲ್ಲ,ಅದು ಜೀವನದ ಪರಿವರ್ತನೆ ಹಾದಿ. ಶಿಕ್ಷಕ ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಚೈತನ್ಯದ ಚಿಲುಮೆ, ಭವಿಷ್ಯದ ಮಾರ್ಗದರ್ಶಕ.ಸ್ಫೂರ್ತಿಯ ಗಣಿ, ಹುರುಪು ಉತ್ಸಾಹ ದೊಂದಿಗೆ ಸದಾ ಪ್ರೋತ್ಸಾಹಿಸುವ ನಮ್ಮ ಬದುಕಿನ ಆಶಾಕಿರಣ ಮತ್ತು ವಿದ್ಯಾಜ್ಯೋತಿ. ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಭಾರತದ ಎರಡನೇ ರಾಷ್ಟ್ರಪತಿ ಮತ್ತು ಮೊದಲ ಉಪರಾಷ್ಟ್ರಪತಿಯಾಗಿದ್ದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಸ್ಮರಣಾರ್ಥ ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತೇವೆ. ಈ ಕೈಗಳಲ್ಲಿ ಬರೆಯುವುದನ್ನು ಕಲಿಸಿದವರು ಯಾರು ? ನಮ್ಮ ಹೃದಯಗಳಲ್ಲಿ ಕನಸುಗಳನ್ನು ಬಿತ್ತಿದವರು ಯಾರು? ಆ ಕನಸುಗಳನ್ನು ನಾವು ಸಾಧಿಸುತ್ತೇವೆ ಎಂದು ನಂಬಿದವರು ಯಾರು? ಅವರೇ ನಮ್ಮ ಗುರುಗಳು. ಶಿಕ್ಷಕರು ಕೇವಲ ಪಾಠ ಮಾಡುವುದಿಲ್ಲ ಅವರು ಬದುಕಿನ ದಾರಿದೀಪ. ಬದುಕಿನ ಹಾದಿಯನ್ನು ತೋರಿಸುತ್ತಾರೆ. ಕತ್ತಲಾದಾಗ ಬೆಳಕಾಗಿ ನಿಲ್ಲುತ್ತಾರೆ. ಬರೀ ಬೆಳಕಲ್ಲ, ಜ್ಞಾನ ದೀಪವಾಗಿ ನಿಲ್ಲುತ್ತಾರೆ. ಗುರುಗಳ ಬೆಳಕು ಮಾತ್ರವೇ ಜ್ಞಾನವೆಂಬ ದೀಪವನ್ನು ಹಚ್ಚಬಲ್ಲದು , ಗುರುವಿನ ಆಶೀರ್ವಾದವೇ ವಿದ್ಯಾರ್ಥಿಯ ಭವಿಷ್ಯಕ್ಕೆ ಬಲವಾದ ಸೇತುವೆ. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಕ ಕೇವಲ ಪಠ್ಯಕ್ರಮದ ಮತ್ತು ಅಂಕಗಳ ಶಿಕ್ಷಣವನ್ನು ಮಾತ್ರ ನೀಡದೇ ಮಾನವೀಯ ಮೌಲ್ಯಗಳನ್ನ, ಸಾಂವಿಧಾನಿಕ ಮೌಲ್ಯಗಳನ್ನ, ನೀತಿ ಶಿಕ್ಷಣವನ್ನು, ವೈಚಾರಿಕತೆಯನ್ನು,ವೈಜ್ಞಾನಿಕ ಮನೋಭಾವ,ಸ್ಪರ್ಧಾತ್ಮಕ ಮನೋಭಾವ, ಕ್ರೀಡಾ ಮನೋಭಾವವನ್ನ ಬೆಳೆಸಿ,ಕಷ್ಟ ಸಹಿಷ್ಣುತೆ ಮತ್ತು ಧಾರ್ಮಿಕ ಸಹಿಷ್ಣುತೆಯನ್ನು ಕಲಿಸುವ, ಸಮಾಜಮುಖಿಯನ್ನಾಗಿಸುವ, ಕ್ರಿಯಾಶೀಲತೆ,ಸೃಜನಾತ್ಮಕತೆಯನ್ನ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಯಾವುದೇ ರಾಗ ದ್ವೇಷವಿಲ್ಲದೆ, ಜಾತಿ, ಮತ, ಜನಾಂಗ,ಲಿಂಗ,ಭಾಷೆ, ಮತ್ತು ಪ್ರಾದೇಶಿಕತೆಯ ಭೇದವಿಲ್ಲದೆ ಶಿಕ್ಷಣವನ್ನ ನೀಡುವ ಅನಿವಾರ್ಯತೆ ಇದೆ. ಅದನ್ನೇ ಮಾಡಬೇಕು ಕೂಡ. ಸಾಧಾರಣ ಶಿಕ್ಷಕ ಹೇಳುತ್ತಾನೆ ಸಾಮಾನ್ಯ ಶಿಕ್ಷಕ ವಿವರಿಸಿತ್ತಾನೆ ಉತ್ತಮ ಶಿಕ್ಷಕ ಪ್ರಾತ್ಯಕ್ಷಿಸುತ್ತಾನೆ ಅತ್ಯುತ್ತಮ ಶಿಕ್ಷಕ ಸ್ಪೂರ್ತಿ ತುಂಬುತ್ತಾನೆ. ನಾನು ಒಬ್ಬ ಶಿಕ್ಷಕ ಶಿಕ್ಷಣವೇ ನನ್ನ ಧರ್ಮ ಶಾಲೆಯೇ ನನಗೆ ದೇವಾಲಯ ಬೋಧನೆಯೇ ನನ್ನ ಪೂಜೆ ಮಕ್ಕಳ ಸಾಧನೆಯ ನನಗೆ ವರಪ್ರಸಾದ. ಪುಸ್ತಕದ ಪುಟದೊಳಗೆ ಸ್ಪುಟವಾಗಿ ಬರೆಸಿ ಮನಸ್ಸಿನೊಳಗೆ ಜ್ಞಾನ ದೀವಿಗೆ ಬೆಳಗಿಸಿ ಬದುಕಿನ ನಿಜ ನಡೆ-ನುಡಿ ಕಲಿಸಿದ ಬೋಧನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ ಎಲ್ಲಾ ಗುರುವರ್ಯರಿಗೂ ಸಾವಿರ ಶರಣು ಶರಣಾರ್ಥಿ. ಗುರುವಿನಿಂದ ಬಂಧು, ಗುರುವಿನಿಂದ ಬಳಗ ಗುರುವಿನಿಂದ ಶ್ರದ್ದೆ, ಗುರುವಿನಿಂದ ವಿದ್ಯೆ ಗುರುವಿನಿಂದ ಗುರಿ, ಗುರುವಿನಿಂದ ಗೆಲುವು ಗುರುವಿನಿಂದ ಜ್ಞಾನ, ಗುರುವಿನಿಂದ ಸ್ಥಾನ ಗುರುವೊಂದು ಶಕ್ತಿ, ಗುರುವಿನಿಂದಲೇ ಮುಕ್ತಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತು ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಗುರುಗಳ ಪಾತ್ರವನ್ನು ಸಾರುತ್ತದೆ. ಒಬ್ಬ ಡಾಕ್ಟರ್ ತಪ್ಪು ಮಾಡಿದ್ರೆ ರೋಗಿ ಸಾಯಬಹುದುದು.
ಒಬ್ಬ ಇಂಜಿನಿಯರ್ ತಪ್ಪು ಮಾಡಿದ್ರೆ ಕಟ್ಟಡ ನಾಶ ಆಗಬಹುದು. ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದ್ರೆ ಇಡೀ ಸಮಾಜ ನಾಶವಾಗುತ್ತದೆ.ಆದುದರಿಂದ ಸಮಾಜವನ್ನು ಹಾಗೂ ರಾಷ್ಟ್ರವನ್ನು ಕಟ್ಟುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯ. ನನ್ನ ಶೈಕ್ಷಣಿಕ ಬದುಕಿನಲ್ಲಿ ನನ್ನನ್ನು ಪ್ರಭಾವಿಸಿದ ಹಲವಾರು ಗುರುಗಳಿದ್ದಾರೆ. ಆದರೆ ಪರೋಕ್ಷವಾಗಿಯೂ ಆದರೂ ಜೀವನದ ಪ್ರತಿ ಹಂತದಲ್ಲೂ ಅತೀ ಹೆಚ್ಚು ಪ್ರಭಾವಿಸಿದ ಶಾಶ್ವತ ಮತ್ತು ಸಾರ್ವಕಾಲಿಕ ಗುರುಗಳೆಂದರೆ ಅದು ಡಾ. ಬಾಬಾಸಾಹೇಬ್ ಭೀಮರಾವ್ ರಾಮ್ ಜೀ ಅಂಬೇಡ್ಕರ್. ಎಲ್ಲರ ಹೃದಯವನ್ನು ಮತ್ತು ಬದುಕನ್ನು ಬೆಳಗಿರುವ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.