ಕೋಕೇರಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ಹಾವಳಿ : ಕೃಷಿ ಗಿಡಗಳಿಗೆ ಹಾನಿ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳಗಾರರ ತೋಟಗಳಿಗೆ ಲಗ್ಗೆಯಿಟ್ಟು ದಾಂಧಲೆ ನಡೆಸಿ ಕೃಷಿ ಗಿಡಗಳನ್ನು ತುಳಿದು ಹಾನಿ ಪಡಿಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕೋಕೇರಿ ಗ್ರಾಮದ ಪೆಮ್ಮಂಡ ರಘು ಪೂಣಚ್ಚ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಕಾಫಿ,ಬಾಳೆ, ಅಡಿಕೆ ಮತ್ತಿತರ ಕೃಷಿ ಗಿಡಗಳನ್ನು ತುಳಿದು ನಾಶ ಪಡಿಸಿದೆ ನಷ್ಟ ಉಂಟು ಮಾಡಿದೆ.
ಇವರ ತೋಟದಲ್ಲಿ 50 ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಾಡಾನೆಗಳು ತುಳಿದು ಧ್ವಂಸಗೊಳಿಸಿ ನಷ್ಟ ಉಂಟು ಮಾಡಿದೆ. ಈ ವ್ಯಾಪ್ತಿಯ ಮಚ್ಚಂಡ ಸುಮತಿ ಕುಂಞಪ್ಪ ಸೇರಿದಂತೆ ಗ್ರಾಮದ ಇತರ ಬೆಳೆಗಾರರ ತೋಟಗಳಿಗೂ ಕೂಡ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿಗಳಗಳನ್ನು ತುಳಿದು ಹಾನಿಪಡಿಸಿದೆ. ಗ್ರಾಮ ವ್ಯಾಪ್ತಿಯಲ್ಲಿ 20 ಕ್ಕೂ ಅಧಿಕ ಕಾಡಾನೆಗಳು ತೋಟದಲ್ಲೇ ಸಂಚಾರ ನಡೆಸುತ್ತಿದ್ದು ಕಾಫಿ ತೋಟಗಳೇ ಕಾಡಾನೆಗಳ ವಾಸ ಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದ ಗ್ರಾಮದ ಬೆಳೆಗಾರರು ಹಾಗೂ ಕಾರ್ಮಿಕರು ತೋಟಗಳಿಗೆ ತೆರಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವ್ಯಾಪ್ತಿಯ ಹಲವಾರು ಕುಟುಂಬಸ್ಥರ ತೋಟಗಳಿಗೆ ಕಾಡಾನೆ ಲಗ್ಗೆ ಇಟ್ಟು ದಾಂಧಲೆ ನಡೆಸಿದ್ದು ಇದರಿಂದ ತೋಟದಲ್ಲಿ ಬೆಳೆದ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಇದರಿಂದ ಗ್ರಾಮದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು ಗ್ರಾಮದಲ್ಲಿ ನಡೆದಾಡಲು ಜನರು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ. ಕಾರ್ಮಿಕರಂತು ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮದಲ್ಲಿ ಇಷ್ಟೆಲ್ಲ ಹಾನಿ ಸಂಭವಿಸುತಿದ್ದರು ಆನೆಗಳು ತೋಟದಲ್ಲೇ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದರು ಕೂಡ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೊಪಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಸರಕಾರ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು,.ಅದರಂತೆ ತೋಟಗಳಲ್ಲಿ ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.