ವಿಬಿಜಿ ರಾಮ್ ಜಿ ಯೋಜನೆಗೆ ಚಾಲನೆ
ಮಡಿಕೇರಿ ಜು.01:-ಮಹತ್ಮಾ ಗಾಂಧಿ ನರೇಗಾ ಯೋಜನೆ ಬದಲಾಗಿ ಕೇಂದ್ರ ಸರ್ಕಾರ ರೂಪಿಸಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆ ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಿದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ ಅನುಷ್ಠಾನಕ್ಕೆ ಸಿದ್ಧತೆ ಆರಂಭಿಸಲಾಗಿದೆ.
ವಿರಾಜಪೇಟೆ ತಾಲ್ಲೂಕು ಸಾಮಥ್ರ್ಯ ಸೌಧದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆ ಸಂಬಂಧಿಸಿದಂತೆ ಒಂದು ದಿನದ ಕಾರ್ಯಗಾರಕ್ಕೆ ವಿರಾಜಪೇಟೆ ತಾ.ಪಂ.ಇಒ ರಾಜೇಶ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿ ಅವರು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜಿವಿಕ್ ಮಿಷನ್ (ಗ್ರಾಮೀಣ) ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ರೂಪುರೇಷ ಸಿದ್ದ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಮಾಡಬೇಕು ಎಂದರು.
ವಿಬಿಜಿ ರಾಮ್‍ಜಿ ಕಾಯ್ದೆ ವೈಶಿಷ್ಟಗಳು, ಸಾಂಸ್ಥಿಕ ರಚನೆ ಮತ್ತು ಸಾಂಸ್ಥಿಕ ಚೌಕಟ್ಟು ಮತ್ತು ಯೋಜನಾ ಚೌಕಟ್ಟು, ಯೋಜನಾ ಪ್ರಕ್ರಿಯೆಯ ಹಂತಗಳು ಮತ್ತು ಒಗ್ಗೂಡಿಸುವಿಕೆ ಬಗ್ಗೆ ಸಹಾಯಕ ನಿರ್ದೇಶಕರಾದ ಎಂ.ಡಿ.ಶ್ರೀನಿವಾಸ್ (ಗ್ರಾ.ಉ) ಅವರು ಮಾಹಿತಿ ನೀಡಿದರು.
ಯೋಜನೆಯ ಮುಖ್ಯ ಉದ್ದೇಶ ತಿಳಿಸುತ್ತಾ, ಸ್ವಯಂ ಪ್ರೇರಿತವಾಗಿ ಆಕುಶಲ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಗ್ರಾಮೀಣ ವಯಸ್ಕರ ಸದಸ್ಯರ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಕಡ್ಡಾಯ ಉದ್ಯೋಗ ಖಾತ್ರಿ, ವಿಕಸಿತ ಗ್ರಾಮ ಪಂಚಾಯಿತಿ ಯೋಜನೆಗಳ ಮೂಲಕ ಒಗ್ಗೂಡಿಸುವಿಕೆ ಸ್ಯಾಚುರೇಷನ್ ಆಧಾರಿತ ಯೋಜನೆ ಮತ್ತು ಸರ್ಕಾರದ ಸಮಗ್ರ ಕಾರ್ಯಾಚರಣೆ ವಿತರಣೆ ಸಾಂಸ್ಥಿಕರಿಸುವುದು, ಕೃಷಿ ಕಾಲದಲ್ಲಿ ಕೃಷಿ ಕಾರ್ಮಿಕರ ಸಮರ್ಪಕ ಲಭ್ಯತೆಗೆ ಸುಗಮಗೊಳಿಸಲು 60 ದಿನಗಳ ವಿರಾಮ ಕೊಟ್ಟು ಪರಿಪೂರ್ಣತೆ ಸಾಧಿಸಲು ಕಾಮಗಾರಿಗಳ ಒಗ್ಗೂಡಿಸುವಿಕೆಗಾಗಿ ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯದ ಜೊತೆಗೆ ಸಮಗ್ರ ಡಿಜಿಟಲ್ ವ್ಯವಸ್ಥೆಯ ಮೂಲಕ ಆಡಳಿತ ಹೊಣೆಗಾರಿಕೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆ ಆಧುನಿಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಯೋಜನೆ ಅಡಿಯಲ್ಲಿ ತಂತ್ರಜ್ಞಾನದ ಪಾತ್ರ ಮತ್ತು ಅನುಮತಿಸಲಾದ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ತಾಲ್ಲೂಕು ಐಇಸಿ ಸಂಯೋಜಕರಾದ ನರೇಂದ್ರ ಮಾಹಿತಿ ನೀಡಿದರು. ಅರ್ಹ ಗ್ರಾಮೀಣಾ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಉದ್ಯೋಗ ಕಲ್ಪಿಸಲಾಗುವುದು. (ಗಂಡು ಹೆಣ್ಣಿಗೆ ಸಮಾನ ಕೂಲಿ ರೂ.382.) ಈ ಯೋಜನೆಯು ಭಾರತ ಸರ್ಕಾರದ ಒಂದು ಮಹತ್ವಕಾಂಕ್ಷೆಯ ದೃಷ್ಟಿಕೋನವಾಗಿದ್ದು, ಸ್ವಾತಂತ್ರ್ಯದ 100 ವರ್ಷಗಳ ನೆನಪಿಗಾಗಿ 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿ, ವಿರಾಜಪೇಟೆ/ ಪೊನ್ನಂಪೇಟೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ನರೇಗಾ ಯೋಜನೆಯ ತಾಂತ್ರಿಕ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂಚಾಯಿತಿ ಡೇಟಾ ಎಂಟ್ರಿ ಅಪರೇಟರ್, ಇತರರು ಉಪಸ್ಥಿತರಿದ್ದರು.

