ತೊರೆನೂರು ವಿರಕ್ತ ಮಠದಲ್ಲಿ ವಚನ ಚಿಂತನಾಗೋಷ್ಠಿ: ವಚನಗಳು ಸಮಾಜದ ಸಾಮಾಜಿಕ ಮೌಲ್ಯಗಳ ರೂಪ: ವಚನ ಕುಮಾರಸ್ವಾಮಿ ಅಭಿಮತ:

ತೊರೆನೂರು ವಿರಕ್ತ ಮಠದಲ್ಲಿ  ವಚನ ಚಿಂತನಾಗೋಷ್ಠಿ:  ವಚನಗಳು ಸಮಾಜದ ಸಾಮಾಜಿಕ ಮೌಲ್ಯಗಳ ರೂಪ: ವಚನ ಕುಮಾರಸ್ವಾಮಿ ಅಭಿಮತ:

ಕುಶಾಲನಗರ : ವಚನಗಳು ಸಮಾಜದ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಬದುಕಿನ ಸತ್ಯವನ್ನು ವಚನ ರೂಪದಲ್ಲಿ ತೆರೆದಿಟ್ಟ ಮಹಾನ್ ಚೇತನ ವಿಶ್ವ ಗುರು ಬಸವಣ್ಣ ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಕುಶಾಲನಗರ ತಾಲ್ಲೂಕಿನ ತೊರೆನೂರು ಶ್ರೀ ವಿರಕ್ತಮಠದಲ್ಲಿ ಜಿಲ್ಲಾ ವೀರಶೈವ- ಲಿಂಗಾಯತ ಮಹಾಸಭಾದ ವತಿಯಿಂದ ಏರ್ಪಡಿಸಿದ್ದ ಸುತ್ತೂರು ಮಹಾಸಂಸ್ಥಾನ ಮಠದ ಡಾ ರಾಜೇಂದ್ರ ಸ್ವಾಮೀಜಿಯವರ 110 ನೇ ಜಯಂತಿ ಹಾಗೂ ಮಾಸಿಕ ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ವಚನ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು ಚಿಂತನಾ ಗೋಷ್ಠಿಯಲ್ಲಿ ಪ್ರವಚನ ನೀಡಿದ ಅವರು,

ತಲೆಯಲ್ಲಿ ಸದ್ವಿಚಾರ, ಎದೆಯಲ್ಲಿ ಸದ್ಭಾವ, ಕೈಯಲ್ಲಿ ಸತ್ಕಾರ್ಯ ಮತ್ತು ಬಾಯಿಂದ ಬರುತ್ತಿದ್ದಂತಹ ಸವಿಮಾತುಗಳನ್ನು ವಚನ ಸಾಹಿತ್ಯ ರೂಪದಲ್ಲಿ ನೀಡಿದ ಶರಣರ ಚಿಂತನೆಗಳು ಸದಾ ಕಾಲಕ್ಕೂ ಸರ್ವಹಿತ. ಅಂತಹ ಶರಣರ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಉಪಕಾರಿಯಾದವರು ಸುತ್ತೂರಿನ 23 ನೇ ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು. ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಒಂದು ಸಲ ವಿದ್ಯಾರ್ಥಿನಿಲಯ ನಡೆಸಲು ದಿನಸಿ ಪದಾರ್ಥಗಳು ಇಲ್ಲದಿದ್ದಾಗ ತಮ್ಮ ಚಿನ್ನದ ಕರಡಿಗೆ ಮತ್ತು ಚಿನ್ನದ ರುದ್ರಾಕ್ಷಿ ಸರ ಗಿರವಿ ಇಟ್ಟು ವಿದ್ಯಾರ್ಥಿಗಳಿಗೆ ದಾಸೋಹ ವ್ಯವಸ್ಥೆ ಮಾಡಿದ ಮಾತೃಹೃದಯಿಗಳು. ಅಂತಹ ವ್ಯಕ್ತಿಗಳ ಜಯಂತಿ ಆಚರಿಸಿ ಅವರ ತತ್ವಗಳನ್ನು ಅನುಸರಿಸುವುದರಿಂದ ನಮ್ಮ ಮನದ ಮಲಿನ ದೂರವಾಗುತ್ತದೆ ಎಂದರು.

ಮೈಸೂರು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಅದೆಂತಹ ಅಡೆತಡೆಗಳು ಬಂದರೂ ಕೂಡ ಸಮಾಧಾನಿಯಾಗಿರಬೇಕು ಎಂಬುದನ್ನು ಅಕ್ಕಮಹಾದೇವಿ ತನ್ನ ವಚನದಲ್ಲಿ ಬೋಧಿಸಿದ್ದಾರೆ. ಹಾಗಾಗಿ ಮನೆಯಲ್ಲಿನ ಅತ್ತೆ ಮಾವ ಎಂಬ ಹಿರಿಯ ಜೀವಗಳು ಏನಾದರೂ ಹೇಳಿದಾಗ ಸೊಸೆಯಾದವರು ಸಮಾಧಾನವಾಗಿಯೇ ಅದನ್ನು ಸ್ವೀಕರಿಸುವ ಮೂಲಕ ಸವಿಯಾದ ಕುಟುಂಬಕ್ಕೆ ಅಡಿಗಲ್ಲಾಗಬೇಕು. ಇಂತಹ ಸಂಸ್ಕಾರಗಳನ್ನು ನಾಡಿಗೆ ವಚನಗಳ ಮೂಲಕ ಬಿತ್ತುವಲ್ಲಿ ಹಾಗೂ ಬೆಳೆಯುವಲ್ಲಿ ಜೆ.ಎಸ್.ಎಸ್ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಅನ್ನ, ಆಶ್ರಯ ಮತ್ತು ಅರಿವು ನೀಡಿ ಗಂಧದ ಕೊರಡಿನಂತೆ ತಾವು ಸವೆದು ಸಮಾಜಕ್ಕೆ ಸುಧೆಯನ್ನು ನೀಡಿ ಸುತ್ತೂರಿನ ಸಿರಿಗಂಧ ಎನಿಸಿಕೊಂಡವರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಅವರು ಹಾಕಿಕೊಟ್ಟ ಭದ್ರ ಬುನಾದಿಯಿಂದ ಅನ್ಯ ರಾಜ್ಯ ಮತ್ತು ಅನ್ಯ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು ಸ್ಥಾಪನೆಯಾಗಿ ಸುತ್ತೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು‌.

ಅಧ್ಯಕ್ಷತೆ ವಹಿಸಿದ್ದ ತೊರೆನೂರು ವಿರಕ್ತ ಮಠದ ಮಲ್ಲೇಶಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಂಸ್ಕಾರವನ್ನು ರೂಢಿಸಿಕೊಂಡು ಮಹಾತ್ಮರ ಜಯಂತಿ ಪೂರಕವಾಗಿವೆ. ತಂದೆ ತಾಯಿಗಳು ಸಂಸ್ಕಾರವಂತರಾದರೆ ಮಕ್ಕಳು ಕೂಡಾ ಅದೇ ಹಾದಿಯಲ್ಲಿ ನಡೆಯುತ್ತಾರೆ ಎಂದರು. ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಇಂದು ಮಾನವರು ಸಂಸಾರ ಬಂಧನದಲ್ಲಿ ಸಿಲುಕಿ ಸಂಸ್ಕಾರ ಕಣ್ಮರೆಯಾಗುತ್ತಿದೆ. ಶಿವನುಭವ ಗೋಷ್ಠಿಗಳು ಶಿವತ್ವವನ್ನು ಮೈಗೂಡಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದರು.

 ಇದೇ ವೇಳೆ ಕುಶಾಲನಗರದ ಕೆನರಾ ಬ್ಯಾಂಕ್ ನ ಕೃಷಿ ವಿಸ್ತರಣಾ ಅಧಿಕಾರಿ ಕೆ.ಆರ್. ಲೌಕಿಕ್ ಮತ್ತು ದಾಸೋಹಿ ಹೆಬ್ಬಾಲೆಯ ಹುರಕ್ಕಿ ರಾಜಣ್ಣನವರ ಮಗನಾದ ಎಚ್ ಆರ್ ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ಕೊಡಗು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್ .ವಿ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶತಾಯುಷಿ ಮರೂರು ಗ್ರಾಮದ ಹಿರಿಯ ಕೃಷಿಕ ಹೆಚ್.ವಿ. ಶಿವರುದ್ರಪ್ಪ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಜಿ. ಪ್ರೇಮ್ ಕುಮಾರ್, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಾಂಭಶಿವಯ್ಯ, ಖಜಾಂಚಿ ಎಚ್.ಪಿ ಉದಯ್ ಕುಮಾರ್, ನಿರ್ದೇಶಕ ಗಣೇಶ್, ಶಿಕ್ಷಕ ಬಸವರಾಜು ಇತರರು ಉಪಸ್ಥಿತರಿದ್ದರು.