ವಿರಾಜಪೇಟೆ: ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ: ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳು ಬುನಾದಿಯಾಗಿದೆ:ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯ

ವಿರಾಜಪೇಟೆ: ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ: ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳು ಬುನಾದಿಯಾಗಿದೆ:ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯ

ವಿರಾಜಪೇಟೆ:ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು, ಕೊಟ್ಟೋಳಿ ಗ್ರಾಮದ ಆಶ್ರಯ ಕಾಲೋನಿ ವ್ಯಾಪ್ತಿಯಲ್ಲಿ ₹20 ಲಕ್ಷಗಳ ಅನುದಾನದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳು ಬುನಾದಿ ಆಗಿದೆ. ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಂಗನವಾಡಿಯ ಸ್ಥಳೀಯ ಮಕ್ಕಳ ವಿದ್ಯಾರ್ಜನೆಗೆ ಪೂರಕವಾಗುವಂತಾಗಲಿ ಎಂದು ಹಾರೈಸಿದರು. ಶೀಘ್ರದಲ್ಲೇ ಅಂಗನವಾಡಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಮುಂದಿನ ಶಾಲೆಯಿಂದ ಈ ಭಾಗದ ಪುಟಾಣಿ ಮಕ್ಕಳ ವಿದ್ಯಾರ್ಜನೆಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ನಿವಾಸಿಗಳು ತಮ್ಮ ಮಕ್ಕಳ ವಿದ್ಯಾಭ್ಯಾಸ ಕಡೆಗೆ ಹೆಚ್ಚಿನ ಗಮನ ನೀಡುವುದು ಇಂದಿನ ಅವಶ್ಯಕತೆಯಾಗಿದ್ದು, ಪುಟಾಣಿ ಮಕ್ಕಳ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ಹಾಗೂ ತಾನು ಬದ್ಧರಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯಂಡ ಮಹೇಶ್, ಪಂಚಾಯಿತಿ ಅಧ್ಯಕ್ಷರಾದ ಜೇಫ್ರಿ ಉತ್ತಪ್ಪ, ಕೆಡಿಪಿ ಸದಸ್ಯರಾದ ಮಾಳೆಟೀರ ಪ್ರಶಾಂತ್, ಪಂಚಾಯತಿ ಸದಸ್ಯರಾದ ಇಸ್ಮಾಯಿಲ್, ಪವಿತ್ರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.