ಮತಗಳ್ಳತನ ಜಾಗೃತಿ ಅಭಿಯಾನ ಜಿಲ್ಲೆಯಲ್ಲಿ ಒಂದು ಲಕ್ಷ ಸಹಿ ಸಂಗ್ರಹದ ಗುರಿ: ಧರ್ಮಜ ಉತ್ತಪ್ಪ
admincoorgdaily
ಮಡಿಕೇರಿ: ರಾಜ್ಯಾದ್ಯಂತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚುನಾವಣೆಯಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು ಕೊಡಗಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರ ಸಹಿ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಸ್ಪಷ್ಟಪಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮತಗಳ್ಳತನವಾಗಿರುವ ಬಗ್ಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಾಕ್ಷ್ಯಗಳೊಂದಿಗೆ ಬಹಿರಂಗಪಡಿಸಿದ್ದು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂವಿಧಾನ ಬದ್ದ ಹೋರಾಟವನ್ನು ಕಾಂಗ್ರೆಸ್ ಪಕ್ಷ ನಡೆಸಲಿದೆ ಎಂದು ಧರ್ಮಜ ಉತ್ತಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಂದು ಬ್ಲಾಕ್ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಅವರು ಪ್ರತಿಬೂತ್ ನಲ್ಲಿ ಬಿ.ಎಲ್.ಎ 2 ಪುನರ್ರಚನೆ ಮಾಡಲು ಮತ್ತು ವಲಯ ಕಾಂಗ್ರೆಸ್ ಬೂತ್ ಕಾಂಗ್ರೆಸ್ ಸಮಿತಿಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಿ ಮುಂಬರುವ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಜ್ಜುಗೊಳಿಸಲು ಕಾರ್ಯಪ್ರೃತ್ತರಾಗುವಂತೆ ಸೂಚನೆ ನೀಡಿದ್ದಾರೆ.
ಮುಂದಿನ ಸೋಮವಾರ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮತಗಳ್ಳತನ ಜಾಗೃತಿ ಆಂದೋಲನ ಆರಂಭಗೊಂಡು ಜಿಲ್ಲೆಯ ಎಲ್ಲಾ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯಲಿದ್ದು ಬ್ಲಾಕ್ ಕಾಂಗ್ರೆಸ್ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷರು ಪಧಾಧಿಕಾರಿಗಳು ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಧರ್ಮಜ ಉತ್ತಪ್ಪ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಕೊಲ್ಯದ ಗಿರೀಶ್, ಮುನೀರ್ ಅಹಮದ್, ಮುಖಂಡರಾದ ಟಿ.ಪಿ.ರಮೇಶ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ.ಶಶಿಧರ್,ಸೋಮವಾರ ಪೇಟೆ ಬ್ಲಾಕ್ ಅಧ್ಯಕ್ಷರಾದ ಸತೀಶ್, ನಾಪೊಕ್ಲು ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ಸಭೆಯಲ್ಲಿ ಉಪಸ್ಥಿತರಿದ್ದರು.