ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಮುನ್ನಡೆಯುವಂತಾಗಬೇಕು: ಶಾಸಕ ಎಎಸ್ ಪೊನ್ನಣ್ಣ
ಮಡಿಕೇರಿ ಏ.12:-ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಮುನ್ನಡೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಲಾಖೆ ಸಿಬ್ಬಂದಿಗಳಿಗೆ ಎರಡು ದಿನಗಳ ಕಾಲ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ 3 ನೇ ಸ್ಥಾನ ಪಡೆದಿದೆ. ಇದು ಜಿಲ್ಲೆಯವರಲ್ಲಿ ಸಂತಸ ಹಾಗೂ ಹೆಮ್ಮೆಯ ತರುತ್ತದೆ. ಜತೆಗೆ ಇವರಲ್ಲಿಯೂ ಸಹ ಶೇ.35, 40 ಅಂಕ ಪಡೆದವರೂ ಇದ್ದಾರೆ. ಇಂತವರು ಶಿಕ್ಷಣ ಜತೆಗೆ ಕ್ರೀಡೆ ಸೇರಿದಂತೆ ಆಸಕ್ತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸವಾಲನ್ನು ಮೆಟ್ಟಿ ನಿಂತು ಮೇಲೆ ಬರಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಸಲಹೆ ಮಾಡಿದರು.
ಕ್ರೀಡೆ ಎಂದರೆ ಕೊಡಗು, ಕೊಡಗು ಎಂದರೆ ಕ್ರೀಡೆ ಎಂಬಂತಾಗಿದೆ. ಜಿಲ್ಲೆಯಿಂದ ಅತಿ ದೊಡ್ಡ ಪ್ರಮಾಣದಲ್ಲಿ ದೇಶಕ್ಕೆ ಕ್ರೀಡಾಪಟುಗಳನ್ನು ನೀಡಿದ ಜಿಲ್ಲೆ ಕೊಡಗು ಆಗಿದೆ ಎಂದರು.
ಬೇಸಿಗೆ ಕಾಲದಲ್ಲಿ ಜಿಲ್ಲೆಯಾದ್ಯಂತ ವಿವಿಧ ಕ್ರೀಡಾಕೂಟದ ಹಬ್ಬಗಳು ಜರುಗುವುದು ವಿಶೇಷ. ಆ ನಿಟ್ಟಿನಲ್ಲಿ ಕ್ರೀಡಾ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಜಿಲ್ಲೆಯ ಸಣ್ಣ ಸಣ್ಣ ಮೈದಾನಗಳಲ್ಲಿಯೂ ವಿವಿಧ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಇದರಿಂದ ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗಿದೆ ಎಂದು
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ನುಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಆದರೆ ಭಾಗವಹಿಸುವುದು ಅತಿಮುಖ್ಯ. ಸಣ್ಣ ವಯಸ್ಸಿನಲ್ಲಿಯೇ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡರೆ ಉತ್ತಮ ಪ್ರಜೆಗಳಾಗಿ ಬೆಳೆಯಬಹುದು ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು.
ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿಯೂ ಸಹ ಮಾನಸಿಕತೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಹಾಗೆಯೇ ಮಕ್ಕಳೇ ಹೆಚ್ಚಿನ ಒತ್ತಡ ತೆಗೆದುಕೊಂಡು ಮುನ್ನಡೆಯುತ್ತಿರುವುದನ್ನು ಕಾಣುತ್ತೇವೆ ಎಂದರು.
ಪ್ರತಿಯೊಬ್ಬರಿಗೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಅತ್ಯಗತ್ಯ, ಆ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್ ಅವರು ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಜಾಗ ಇದ್ದು, ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೆ ಸಹಕಾರ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಪದ್ಧತಿಯಲ್ಲಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಸೇವಾ ಭದ್ರತೆ ಒದಗಿಸುವಂತಾಗಬೇಕು. ಹಾಗೆಯೇ ಮಿನಿ ಆರೋಗ್ಯ ಸೌಧ ನಿರ್ಮಾಣಕ್ಕೆ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಅರುಣ್ ಕುಮಾರ್ ಮನವಿ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳಾದ ಡಾ.ಆನಂದ್, ಡಾ.ಸನತ್ ಕುಮಾರ್, ಆಹಾರ ಸುರಕ್ಷತೆ ಅಧಿಕಾರಿ ಡಾ.ಅನಿಲ್ ಧವನ್, ಡಾ.ಇಂಧೂದರ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಪಾಲಾಕ್ಷ, ನವೀನ್, ದೇವರಾಜು, ಶ್ರೀನಾಥ್, ಮಂಜುನಾಥ್ ಇತರರು ಇದ್ದರು.