ಡಾ.ರಾಜ್ ಕುಮಾರ್ ಅವರ 97 ನೇ ಜನ್ಮ ದಿನಾಚರಣೆ; ಡಾ.ರಾಜ್ ಕುಮಾರ್ ಕನ್ನಡ ನಾಡಿನ ಧ್ರುವತಾರೆ: ಪಿ.ಕಲಾವತಿ

ಡಾ.ರಾಜ್ ಕುಮಾರ್ ಅವರ 97 ನೇ ಜನ್ಮ ದಿನಾಚರಣೆ;  ಡಾ.ರಾಜ್ ಕುಮಾರ್ ಕನ್ನಡ ನಾಡಿನ ಧ್ರುವತಾರೆ: ಪಿ.ಕಲಾವತಿ

ಮಡಿಕೇರಿ ಏ.24:-ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕøತರಾದ ಡಾ.ರಾಜ್ ಕುಮಾರ್ ಅವರು ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ತಿಳಿಸಿದ್ದಾರೆ.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಡಾ.ರಾಜ್ ಕುಮಾರ್ ಅವರ 97 ನೇ ಜನ್ಮ ದಿನಾಚರಣೆ ಹಾಗೂ ಡಾ.ರಾಜ್‍ಕುಮಾರ್ ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಡಾ.ರಾಜ್ ಕುಮಾರ್ ಅವರು ಗೋಕಾಕ್ ಚಳುವಳಿ ಮೂಲಕ ಕನ್ನಡ ನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿ, ಕನ್ನಡ ನಾಡು, ನುಡಿ, ಭಾಷೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. 

ಡಾ.ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮೆರೆದಿದ್ದಾರೆ. ನಟ ಸಾರ್ವಭೌಮ ಮತ್ತು ಖ್ಯಾತ ಹಿನ್ನೆಲೆ ಗಾಯಕರಾಗಿ ಚಲನಚಿತ್ರ ರಂಗದಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ನಗರಸಭೆ ಅಧ್ಯಕ್ಷರು ನುಡಿದರು.

ನಿವೃತ್ತ ಶಿಕ್ಷಕರಾದ ಉ.ರಾ.ನಾಗೇಶ್ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ ಡಾ.ರಾಜ್ ಕುಮಾರ್ ಅವರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ‘ಮನೋಜ್ಞ ಅಭಿನಯ’ ನೀಡಿ ಇಂದಿಗೂ ಸಹ ನಾಡಿನ ಜನರಲ್ಲಿ ಕಣ್ಣಿಗೆ ಕಟ್ಟುವಂತೆ ಇದ್ದಾರೆ ಎಂದು ಹೇಳಿದರು. 

ಮನಸ್ಸು ಮತ್ತು ದೇಹ ಗುಡಿಯಾಗಬೇಕು. ಮಾತು ನುಡಿಯಾಗಬೇಕು ಎಂಬಂತೆ ಡಾ.ರಾಜ್ ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಉ.ರಾ.ನಾಗೇಶ್ ಅವರು ತಿಳಿಸಿದರು.   

ಡಾ.ರಾಜ್ ಕುಮಾರ್ ಅವರು ‘ಶರೀರವನ್ನು ಶ್ರಮದ ಕಡೆಗೆ, ಬುದ್ದಿಯನ್ನು ಜ್ಞಾನದ ಕಡೆಗೆ, ಮನಸ್ಸನ್ನು ಶ್ರದ್ಧೆಯ ಕಡೆಗೆ ಎಂಬಂತೆ ತಮ್ಮ ಚಲನಚಿತ್ರ ವೃತ್ತಿ ಜೀವನದಲ್ಲಿ ನಡೆದುಕೊಂಡಿದ್ದಾರೆ ಎಂದು ವಿವರಿಸಿದರು.’ 

ಬೆಳಕಿಲ್ಲದ ಹಾದಿಯಲ್ಲಿ ಸಾಗಬಹುದು. ಕನಸ್ಸುಗಳಿಲ್ಲದ ಹಾದಿಯಲ್ಲಿ ಸಾಗಲಾಗದು ಎಂದು ಡಾ.ರಾಜ್ ಕುಮಾರ್ ಅವರು ವರ್ಣಿಸಿದ್ದಾರೆ ಎಂದು ಅವರು ತಿಳಿಸಿದರು. 

‘ಡಾ.ರಾಜ್ ಕುಮಾರ್ ಅವರು ಕನ್ನಡ ಭಾಷೆಗೆ ಭಾವನೆ ತುಂಬಿದ್ದಾರೆ. ಕಲ್ಪನೆಗೆ ರೆಕ್ಕೆ ನೀಡಿದ್ದಾರೆ. ನಟನೆಗೆ ಜೀವ ತುಂಬಿದ್ದಾರೆ. ಕಲೆಗೆ ರೂಪ ನೀಡಿದ್ದಾರೆ. ಹಾಗೆಯೇ ಇಂಪಾಗಿ, ಕಂಪಾಗಿ, ತಂಪಾಗಿ, ನಯ, ವಿನಯ, ಅಭಿನಯ, ನಾಯಕ, ಶಕ್ತಿ, ಭಕ್ತಿಯಿಂದ ಇಡೀ ಕನ್ನಡ ಚಲನಚಿತ್ರ ರಂಗದಲ್ಲಿ ಛಾಪು ಮೂಡಿಸಿದ್ದಾರೆ ಎಂದು ವರ್ಣಿಸಿದರು.’ 

ರಂಗಭೂಮಿಯಿಂದ ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಪಡೆದು ಸರಳ ವ್ಯಕ್ತಿತ್ವ ಹಾಗೂ ಸಾಂಸ್ಕøತಿಕ ಐಕಾನ್ ಆಗಿ ಡಾ.ರಾಜ್ ಕುಮಾರ್ ಅವರು ಕನ್ನಡಿಗರ ಹೃದಯಲ್ಲಿ ಜನಾನುರಾಗಿಯಾಗಿದ್ದಾರೆ ಎಂದರು. 

1954 ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್ ಕುಮಾರ್ ಅವರು ಅಪಾರ ಜನಪ್ರಿಯತೆಗಳಿಸಿದರು ಎಂದರು. 

ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಬಂಗಾರದ ಮನುಷ್ಯ, ಕಸ್ತೂರಿ ನಿವಾಸ, ಬಬ್ರುವಾಹನ, ಕವಿರತ್ನ ಕಾಳಿದಾಸ ಸೇರಿದಂತೆ ಹಲವು ಚಲನಚಿತ್ರದ ನಟನೆಗಳು ಇಂದಿಗೂ ಸಹ ಕಣ್ಮುಂದೆ ಕಾಣುತ್ತವೆ ಎಂದರು.  

ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ‘ಡಾ.ರಾಜ್ ಕುಮಾರ್ ಅವರ ಸರಳತೆ, ಕನ್ನಡ ಭಾಷೆಯ ಮೇಲಿನ ಪ್ರೀತಿ, ಸಂಸ್ಕøತಿಯ ಕೊಡುಗೆಯಿಂದ ಡಾ.ರಾಜ್ ಕುಮಾರ್ ಅವರನ್ನು ‘ಅಣ್ಣಾವ್ರು’ ಎಂದು ಕರೆಯುತ್ತಾರೆ ಎಂದು ತಿಳಿಸಿದರು. 

ಡಾ.ರಾಜ್ ಕುಮಾರ್ ಅವರು ಸಾಮಾಜಿಕ ಕಳಕಳಿಯ ಚಲನಚಿತ್ರಗಳಲ್ಲಿ ನಟಿಸಿ ಇಂದಿಗೂ ಸಹ ಚಲನಚಿತ್ರಗಳನ್ನು ನೋಡುವಂತೆ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೇರು ಪರ್ವತವಾಗಿ ಹೆಸರು ಮಾಡಿದ್ದಾರೆ ಎಂದರು.

ದೇವತಾ ಮನುಷ್ಯ, ಸಂಪತ್ತಿಗೆ ಸವಾಲ್, ಯಾರೇ ಕೂಗಾಡಲಿ, ಕಸ್ತೂರಿ ನಿವಾಸ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ಅವರು ವಿವರಿಸಿದರು. 

ಡಾ.ರಾಜ್ ಕುಮಾರ್ ಅವರು ತಮ್ಮ ಚಲನಚಿತ್ರಗಳಲ್ಲಿ ಕನ್ನಡ ಭಾಷೆಗೆ ಭಾವನೆಯನ್ನು ನೀಡುತ್ತಾ ಹೋಗಿದ್ದಾರೆ. ಕಲೆಗೆ ಸಂಸ್ಕಾರ ಇರಬೇಕು ಎಂದು ರಾಜ್ ಕುಮಾರ್ ಅವರು ಒತ್ತಿ ಹೇಳಿದ್ದಾರೆ. ಅಭಿಮಾನಿಗಳನ್ನು ದೇವರೆಂದು ಸಂಭೋದಿಸಿದ್ದು ವಿಶೇಷವಾಗಿದೆ ಎಂದು ಅನಂತಶಯನ ಅವರುi ವಿವರಿಸಿದರು.

ಡಾ.ರಾಜ್ ಕುಮಾರ್ ಅವರು ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಕನ್ನಡ ಭಾಷೆಯ ಬಗ್ಗೆ ಪ್ರೀತಿ ಮತ್ತು ಹಿಡಿತವನ್ನು ಹೊಂದಿದ್ದರು ಎಂದು ಹೇಳಿದರು. 

ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿ ಡಾ.ರಾಜ್ ಕುಮಾರ್ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜೊತೆ ಕೈಜೋಡಿಸಿ ಕಾರ್ಯಕ್ರಮ ಆಯೋಜಿಸಬೇಕೆಂದು ತೀರ್ಮಾನಿಸಲಾಗಿತ್ತು, ಅದರಂತೆ ಆಯೋಜಿಸಲಾಗಿದೆ ಎಂದರು. 

‘ತಿಂಗಳ(ಮಾಸದ) ನೆನಪು’ ಕನ್ನಡ ಭಾಷೆಗೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ, ಸಾಹಿತಿಗಳು, ಕವಿಗಳು ಸೇರಿದಂತೆ ಕನ್ನಡ ನಾಡು ನುಡಿಗೆ ಅಪಾರ ಕೊಡುಗೆ ನೀಡಿರುವವರನ್ನು ಸ್ಮರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. 

ತಹಶೀಲ್ದಾರ್ ಶ್ರೀಧರ್ ಅವರು ಮಾತನಾಡಿ ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳ ಹಾಡುಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಎಂದರು. 

ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಡಿವೈಎಸ್‍ಪಿ ಸೂರಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ನಗರಸಭೆ ಮಾಜಿ ಅಧ್ಯಕ್ಷರಾದ ಲತಾ ಬಂಗೇರ, ಪ್ರಮುಖರಾದ ಸಂಪತ್ ಕುಮಾರ್, ಅಂಬೆಕಲ್ ನವೀನ್, ಜಯಕುಮಾರ್, ಜಯಲಕ್ಷ್ಮಿ, ಕಿಗ್ಗಾಲು ಗಿರೀಶ್ ಇತರರು ಇದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಸಮರ್ಥ ಕನ್ನಡಿಗ ಬಳಗದ ಅಧ್ಯಕ್ಷರಾದ ಜಯಲಕ್ಷ್ಮಿ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು. 

ಕನ್ನಡ ಸಿರಿ ಸ್ನೇಹ ಬಳಗದಿಂದ ಗಾಯನ: ಸಭಾ ಕಾರ್ಯಕ್ರಮದ ನಂತರ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರ ನೇತೃತ್ವದಲ್ಲಿ, ಡಾ.ರಾಜ್‍ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಪ್ರಯುಕ್ತ ಡಾ.ರಾಜ್ ಕುಮಾರ್ ಅವರ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.  

ಲೋಕೇಶ್ ಸಾಗರ್ ಅವರು ಶಿವರಾಜ್ ಕುಮಾರ್ ಅಭಿನಯದ ಓಂ ಚಲನಚಿತ್ರದ ಹೇ... ದಿನಕರ, ಶುಭಕರ ಧರೆಗೆ ಬಾ.. ಹಾಡು ಹಾಡಿ ಗಮನ ಸೆಳೆದರು. 

ಕುಶಾಲನಗರದ ಸಂಜಯ್ ಅವರು ಪ್ರೇಮದ ಕಾಣಿಕೆ ಚಿತ್ರದ ಹಾಡು ಹಾಡಿದರು. ಮಮತ(ಕನಸ್ಸಲ್ಲೂ ಬಂದನವನಾರೆ), ಸತೀಶ್ ಮತ್ತು ಸುಗಂಧಿ, ಬಸವರಾಜು(ಆರಾಧಿಸುವೇ ಮದನಾರಿ), ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಘ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಗಂಧದ ಗುಡಿ, ಎರಡು ಕನಸು ಚಲನಚಿತ್ರ ಗೀತೆಯನ್ನು ಪುಷ್ಪ ಶಿವರಾಮ್ ಮತ್ತು ಲೋಕೇಶ್ ಸಾಗರ್ ಅವರು ಹಾಡಿದರು. ಚಂದ್ರಶೇಖರ್ ಅವರು ನಿನ್ನ ನನ್ನ ಮನವು ಸೇರಿತು... ಹಾಡು ಹಾಡಿದರು. 

ಸುಪ್ರಿತಾ ಅವರು ಎಲ್ಲೇ ಇರು, ಹೇಗೆ ಇರು ಹಾಡು ಹಾಡಿದರು. ಕಸ್ತೂರಿ ನಿವಾಸದ ಚಲನಚಿತ್ರದ ಹಾಡನ್ನು ಬಿ.ಜಿ.ಅನಂತಶಯನ ಅವರು (ಬಾನಿಗೊಂದು ಎಲ್ಲೇ ಎಲ್ಲಿದೆ), ಸುಮನ್ ಅವರು ಓಂ ಚಲನಚಿತ್ರದ ಓ ಗುಲಾಬಿಯೆ ಹಾಡು ಹಾಡಿದರು. ಕುಮಾರ ಅವರು ಅಶ್ವಮೇಧ ಚಲನಚಿತ್ರದ ಹಾಡು ಹೃದಯ ಸಮುದ್ರ ಕಲಕಿ, ಹೊತ್ತಿದೆ ದ್ವೇಷದ ಬೆಂಕಿ, ರೋಶಾಗ್ನಿ ಜ್ವಾಲೆ ಉರಿದುರಿದು... ಹಾಡು ಹಾಡಿ ಗಮನ ಸೆಳೆದರು. 

ಸತೀಶ್ ಅವರು ಹೃದಯ ಹಾಡಿತು ಚಲನಚಿತ್ರ ನಲಿಯುತಾ ಹಾಡನ್ನು ಹಾಡಿದರು. ಹೀಗೆ ಸುಮಾರು 28 ಕ್ಕೂ ಹೆಚ್ಚು ಗಾಯಕರು ಡಾ.ರಾಜ್ ಕುಮಾರ್ ಅವರು ಹಾಡಿರುವ ಹಾಡು ಹಾಡಿ ರಾಜ್ ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಸುಮಾರು 5 ಗಂಟೆಗೂ ಹೆಚ್ಚು ಕಾಲ ಡಾ.ರಾಜ್ ಕುಮಾರ್ ಅವರ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಉ.ರಾ.ನಾಗೇಶ್ ಅವರು ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. 

ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಉ.ರಾ.ನಾಗೇಶ್, ಸಾಹಿತಿ ಕಿಗ್ಗಾಲು ಗಿರೀಶ್, ಮಣಜೂರು ಮಂಜುನಾಥ್, ಜಯಲಕ್ಷ್ಮಿ, ಚಂದ್ರಶೇಖರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.