ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗಲು ಪ್ಲ್ಯಾನ್ ಮಾಡಿದ್ದೀರಾ! ಆಗಾದರೆ ಈ ಸುದ್ದಿ ಮಿಸ್ಸ್ ಮಾಡದೇ ಓದಿ!
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು:ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಬೆಟ್ಟ ಭಾಗಮಂಡಲ ವಲಯದ ಕಕ್ಕಬೆ ಉಪವಲಯ ವ್ಯಾಪ್ತಿಯಲ್ಲಿ ತಡಿಯಂಡಮೋಳ್ ಬೆಟ್ಟಕ್ಕೆ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಚಾರಣ ನಿರ್ಬಂಧಿಸಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಮಾನವ ಪ್ರಾಣ ಹಾನಿ, ಜಾನುವಾರುಗಳ ಪ್ರಾಣಹಾನಿ, ಮೂಲಭೂತ ಸೌಕರ್ಯಗಳು ಹಾನಿಯಾಗುವಂತಹ ಪ್ರಕರಣಗಳು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಬಿರುಸಿನಮಳೆಯಾಗುತ್ತಿರುವುದರಿಂದ ಮಳೆ ಗಾಳಿಯಿಂದಾಗಿ ಅಪಾಯಕಾರಿ ಹಂತದಲ್ಲಿರುವ ಮರದ ರೆಂಬೆ,ಕೊಂಬೆಗಳು ರಸ್ತೆ ಮೇಲೆ ಅಥವಾ ಸಂಚರಿಸುವ ಮಾರ್ಗದಲ್ಲಿ ಮುರಿದು ಬಿದ್ದು ಪ್ರಾಣಾಪಾಯವಾಗುವ ಸಂಭವ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮುಂಗಾರು ಅವಧಿ ಮುಕ್ತಾಯಗೊಳ್ಳುವವರೆಗೆ ಅರಣ್ಯ ವ್ಯಾಪ್ತಿಯಲ್ಲಿ ಚಾರಣವನ್ನು ನಿಷೇಧಿಸಲಾಗಿದೆ. ಮಡಿಕೇರಿ ಪ್ರಾದೇಶಿಕ ವಿಭಾಗ ವ್ಯಾಪ್ತಿಯ ಭಾಗಮಂಡಲ ವಲಯದ ಕಕ್ಕಬೆ ಉಪವಲಯ ವ್ಯಾಪ್ತಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣ ತೆರಳಲು ಇಲಾಖೆ ಅನುಮತಿ ಪಡೆಯಲು ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಸ್ತುತ ಬೆಟ್ಟ ಪ್ರದೇಶದಲ್ಲಿ ಅತಿಯಾಗಿ ಮಳೆ ಕೂಡ ಆಗುತ್ತಿದ್ದು, ಮೋಡ ಮತ್ತು ಮಂಜು ಕವಿದುಕೊಂಡಿರುವ ಕಾರಣ ರಸ್ತೆಗಳು ಸರಿಯಾಗಿ ಕಾಣದೆ ಪ್ರವಾಸಿಗರು ದಿಕ್ಕು ತಪ್ಪು ಸಾಧ್ಯತೆ ಇದೆ. ಅಲ್ಲದೆ ಕಾಡು ಪ್ರಾಣಿಗಳ ಓಡಾಟ ಕೂಡ ಈ ಪ್ರದೇಶದಲ್ಲಿ ಇರುವುದರಿಂದ ಮಳೆಗಾಲ ಮುಗಿಯುವವರೆಗೆ ಚಾಣಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.