ಕುಶಾಲನಗರ ಪಿ.ಎಂ.ಶ್ರೀ. ಶಾಲೆಯಲ್ಲಿ ಮಕ್ಕಳಿಂದ ಮಣ್ಣಿನ ಗಣೇಶ ಮೂರ್ತಿಗಳ ಪ್ರದರ್ಶನ

ಕುಶಾಲನಗರ ಪಿ.ಎಂ.ಶ್ರೀ. ಶಾಲೆಯಲ್ಲಿ ಮಕ್ಕಳಿಂದ ಮಣ್ಣಿನ ಗಣೇಶ ಮೂರ್ತಿಗಳ ಪ್ರದರ್ಶನ

ಕುಶಾಲನಗರ: ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಘಟಕ ಹಾಗೂ ಶಾಲೆಯ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಗುರುವಾರ ( ಆ.28 ರಂದು ) ಪರಿಸರ ಸ್ನೇಹಿ ಗಣೇಶೋತ್ಸವದ ಅಂಗವಾಗಿ ಪರಿಸರ ಜಾಗೃತಿ ಅಭಿಯಾನ: 2025 ವನ್ನು ನಡೆಸಲಾಯಿತು.

ಶಾಲೆಯಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ಸ್ವತಃ ತಯಾರಿಸಿದ ವಿವಿಧ ನಮೂನೆಯಲ್ಲಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರದರ್ಶನ ಗಮನ ಸೆಳೆಯಿತು. ಪರಿಸರ ಸ್ನೇಹಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಂ.ಎಂ.ಭಾರತಿ, ಪಿ.ಓ.ಪಿ ಮತ್ತು ರಾಸಾಯನಿಕ ಬಣ್ಣದ ಮೂರ್ತಿಗಳನ್ನು ತ್ಯಜಿಸಿ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಕುರಿತು ಮಾಹಿತಿ ನೀಡಿದರು. ಶಾಲೆಯಲ್ಲಿ ಮಕ್ಕಳು ಜೇಡಿಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿರುವ ಕುರಿತು ಮಕ್ಕಳ ಪರಿಸರ ಕಾಳಜಿಯನ್ನು ಅವರು ಶ್ಲಾಘಿಸಿದರು. ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಪ್ರೇರೇಪಿಸಬೇಕು ಎಂದು ಭಾರತಿ ತಿಳಿಸಿದರು.

ಪರಿಸರ ಸ್ನೇಹಿ ಗಣೇಶೋತ್ಸವದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಗೈಡ್ ಕ್ಯಾಪ್ಟನ್ ಪಿ.ಸಿ ಭವ್ಯ , ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಶಿಕ್ಷಕಿ ಎಂ.ಬಿ.ಜಾನಕಿ , ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತಂತೆ ಘೋಷಣೆಗಳನ್ನು ಕೂಗಿ ಗಮನ ಸೆಳೆದರು. ವಿದ್ಯಾರ್ಥಿಗಳು ತಮ್ಮನ್ನು ಗಣೇಶ ಚತುರ್ಥಿ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ , ಭಾರತ್‌ ಸ್ಕೌಟ್ಸ್‌ , ಗೈಡ್ಸ್‌ ನ ಜಿಲ್ಲಾ ಸಂಸ್ಥೆ , ರಾಷ್ಟ್ರೀಯ ಸೇವಾ ಯೋಜನೆ, ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಪ್ರಕೃತಿ ಇಕೋ ಕ್ಲಬ್‌ ಸಹಯೋಗದೊಂದಿಗೆ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಅಭಿಯಾನ ನಡೆಸಲಾಯಿತು.