ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯಹಸ್ತ ನೀಡಿ, ಪ್ರೋತ್ಸಾಹಿಸುವ ಗುಣ ಪ್ರತಿಯೊಬ್ಬರು ಮೈಗೂಢಿಸಿಕೊಳ್ಳಬೇಕು:ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್

ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ  ಆರ್ಥಿಕವಾಗಿ ಸಹಾಯಹಸ್ತ ನೀಡಿ, ಪ್ರೋತ್ಸಾಹಿಸುವ ಗುಣ ಪ್ರತಿಯೊಬ್ಬರು ಮೈಗೂಢಿಸಿಕೊಳ್ಳಬೇಕು:ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್

ವಿರಾಜಪೇಟೆ:ಮಮಕಾರದಿಂದ ಪ್ರೀತಿಯಿಂದ ಸರ್ವವನ್ನು ಗೆಲ್ಲಬಹುದು, ಮಾನವೀಯ ಗುಣಗಳಿಂದ ಮನುಷ್ಯರ ಸಾರ್ಥಕ ಜೀವನ ಸಾಧ್ಯ ಎಂದು ಸಮಾಜ ಸೇವಕಿ ಕಾಣತಂಡ ಬೀನಾ ಜಗದೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜನ ಸೇವಾ ಟ್ರಸ್ಟ್ (ರಿ) ವಿರಾಜಪೇಟೆ ವತಿಯಿಂದ ನಗರದ ಗಾಂಧಿನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂಸ್ಥೆಯ 5ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಬೀನಾ ಜಗದೀಶ್, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕವಾಗಿ ಸಹಾಯಹಸ್ತ ನೀಡುವ ಪರಿಪಾಠ ಬೆಳಸುವುದರೊಂದಿಗೆ ಪ್ರೋತ್ಸಾಹಿಸುವ ಗುಣ ಪ್ರತಿಯೊಬ್ಬರ ಮನದಿಂದ ಬರುವಂತಾಗಬೇಕು. ಸೇವೆಗೆ ಜಾತಿ ಮತ ಧರ್ಮದ ಪರಿಮಿತಿಗಳು ಇಲ್ಲ. ಕಣ್ಣಿನಿಂದ ನೋಡಿ, ಗ್ರಹಿಸಿ ಮಾನವೀಯ ಮನದಿಂದ ಸಮಾಜಕ್ಕೆ ಒಳಿತಾಗುವ ಸೇವೆಗೆ ಅಣಿಯಾಗೇಕು.ನಾವು ಮಾಡುವ ಸೇವೆಯಿಂದ ಸೃಷ್ಟಿಕರ್ತನು ಕೃತಾರ್ಥನಾಗುತ್ತಾನೆ. ಈ ನಿಟ್ಟಿನಲ್ಲಿ ಜನಸೇವಾ ಟ್ರಸ್ಟ್ ಸತತ ಐದು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರನ್ನು ಗುರುತಿಸಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

 ಜನಸೇವಾ ಟ್ರಸ್ಟ್ ವಿರಾಜಪೇಟೆ ಸ್ಥಾಪಕಾಧ್ಯಕ್ಷರಾದ ಶರೀಫ್ ಮಾತನಾಡಿ, ಜನರ ಸೇವೆಯೆ ಮಾನವ ಧರ್ಮ ಎಂಬ ಧ್ಯೇಯದಿಂದ ಸತತ ಐದು ವರ್ಷಗಳಿಂದ ಬಡ ಹೆಣ್ಣು ಮಕ್ಕಳ ಮದುವೆ, ರೋಗಿಗಳಿಗೆ ಚಿಕಿತ್ಸಾ ವೆಚ್ಚ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಸಾಧಕರಿಗೆ ಸನ್ಮಾನ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ದಾನಿಗಳ ನೆರವಿನಿಂದ ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರವನ್ನು ನೀಡಲಾಗುತ್ತಿದೆ. ದಾನಿಗಳ ಸ್ಪಂದನೆ, ಮತ್ತು ಪ್ರೋತ್ಸಾಹದಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನದ ಜಿಲ್ಲಾ ಉಪಾಧ್ಯಕ್ಷ ಸಿ.ಎ. ನಾಸಿರ್ ಅವರು ಮಾತನಾಡಿ , ಮಾನವೀಯ ನೆಲೆಗಳನ್ನು ಗುರುತಿಸಿ ಸೇವೆ ಮಾಡಲು ಇಚ್ಚೆಯುಳ್ಳವರು ಅನೇಕರಿದ್ದಾರೆ. ಅವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸವಾಗಬೇಕು. ಬಡ ರೋಗಿಗಳಿಗೆ ಚಿಕಿತ್ಸೆಗಾಗಿ ಪ್ರತಿಸ್ಪಂದಿಸುವ ಮನಸ್ಸುಗಳು ನಗರದಲ್ಲಿದ್ದಾರೆ..ಸರ್ಕಾರದ ಅಲ್ಪಮಟ್ಟಿಗೆ ಆರ್ಥಿಕ ನೆರವು ಮತ್ತು ಸೇವಾ ಸಂಸ್ಥೆಗಳ ಧನ ಸಹಾಯದಿಂದ ಅನೇಕ ರೋಗಿಗಳು ಗುಣಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಜನಸೇವಾ ಟ್ರಸ್ಟ್ ತನ್ನ ಸಮಾಜಮುಖಿ ಕೆಲಸಗಳಿಂದ ಉತ್ತಮ ಎನಿಸಿಕೊಂಡಿದೆ ಎಂದು ಹೇಳಿದರು.

 ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ 80 ವಿದ್ಯಾರ್ಥಿಗಳಿಗೆ ತಲಾ, 3000 ರೂಗಳಂತೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಮತ್ತು ಎಸ್.ಎಸ್.ಎಲ್.ಸಿ, ಮತ್ತು ಪಿ.ಯು.ಸಿ ಪದವಿ ಹಾಗೂ ಮದ್ರಸ ವಿಭಾಗಗಳಲ್ಲಿ ಸಾಧನೆಗೈದ ಅಪ್ರತಿಮ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಪುರಸಭೆಯ ಸ್ಥಾಯಿ ಸಮಿತಿ ಅಧಕ್ಷರಾದ ಅಬ್ದುಲ್ ಜಲೀಲ್, ಸಿ.ಎನ್. ಸಿ ಪಾಲಿ ಕ್ಲಿನಿಕ್ ನ ವೈದ್ಯರಾದ ಮಕ್ಕಳ ತಜ್ಞ ಡಾ. ಬಾಷ,ವಕೀಲರಾದ ಬಾನು ಅಂಬಿ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪಾಲಿಟೀವ್ ಹೆಲ್ತ್ ಕೆರ್ ನಗರ ಅಧಕ್ಷರಾದ ಶಜೀರ್, ಉದ್ಯಮಿ ನಾವಫ್, ಎಸ್.ಡಿ.ಪಿ.ಐ ನಗರ ಘಟಕದ ಅಧಕ್ಷರಾದ ಸಾಬಿತ್, ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನ ಸೇವಾ ಟ್ರಸ್ಟ್ ನಿರ್ದೇಶಕರಾದ ಇಂತಿಯಾಜ್ ಸ್ವಾಗತಿಸಿ, ಆಶೀಫ್ ಅಮ್ಮತ್ತಿ ನಿರೂಪಿಸಿದರು. ಸ್ಥಾಪಕ ಅಧ್ಯಕ್ಷರಾದ ಶರೀಫ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಜನಸೇವಾ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ