ಗೋಣಿಕೊಪ್ಪಲು ಕಾವೇರಿ ಕಾಲೇಜು ಪೋಷಕರ- ಅಧ್ಯಾಪಕರ ಸಭೆ

Apr 29, 2026 - 20:53
 0  483
ಗೋಣಿಕೊಪ್ಪಲು ಕಾವೇರಿ ಕಾಲೇಜು ಪೋಷಕರ- ಅಧ್ಯಾಪಕರ ಸಭೆ

ಗೋಣಿಕೊಪ್ಪಲು : ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳ ಪೋಷಕರು ಮತ್ತು ಬೋಧಕ ಸಭೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾವೇರಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೆ. ಎಂ. ಬೆಳ್ಳಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ. ಪಿ. ಬೋಪಣ್ಣ ಮಾತನಾಡಿ,

ನಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಪೋಷಕರೂ ಕೂಡ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಮಾಡಬೇಕು. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕಿ ಕಿನ್ನತೆಗೆ ಒಳಗಾಗುತ್ತಿದ್ದು, ಇಂತಹ ಮಕ್ಕಳ ಬಗ್ಗೆ ಪೋಷಕರು ನಿಗಾವಹಿಸಬೇಕು. ಕೆಲವು ಮಕ್ಕಳು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ದಿನಚರಿಯ ಬಗ್ಗೆ ಗಮನವಿಡಬೇಕು. ಅತಿಯಾದ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದರು.

ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಮಾತನಾಡಿ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆ, ಎನ್ ಸಿ ಸಿ, ಎನ್ ಎಸ್ ಎಸ್, ರೋವರ್ಸ್ ರೆಂಜರ್ಸ್ ನಲ್ಲಿಯೂ ವಿದ್ಯಾರ್ಥಿಗಳ ಬೆಳವಣಿಗೆ ಅವಕಾಶ ಮಾಡಿಕೊಟ್ಟಿದ್ದು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಂತಿಮ ವರ್ಷದ ಪದವಿ ಓದುವ ಸಮಯದಲ್ಲಿಯೇ ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಸುವ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಸಭೆಗೆ ಆಗಮಿಸಿ ಕಾಲೇಜಿನ ಶಿಸ್ತು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕೆಲವು ಸಲಹೆ ಗಳನ್ನು ನೀಡಿ, ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ 2026-27 ನೇ ಸಾಲಿನ ಪೋಷಕ -ಅಧ್ಯಾಪಕರ ಸಂಘದ ನೂತನ ಉಪಾಧ್ಯಕ್ಷರಾಗಿ ಸಾಯೀಶ್ವರಿ. ಎ. ಟಿ, ಜಂಟಿ ಕಾರ್ಯದರ್ಶಿಗಳಾಗಿ ತುಳಸಿ ಐ. ಪಿ, ರೂಪ. ಬಿ. ಕೆ ಅವರನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭ ಪೋಷಕರ ಮತ್ತು ಅಧ್ಯಾಪಕರ ಸಂಘದ ಉಪಾಧ್ಯಕ್ಷೆ ಧನಲಕ್ಷ್ಮಿ ಎಸ್, ಜಂಟಿ ಕಾರ್ಯದರ್ಶಿ ಮೀನ ಎಂ.ಬಿ, ಖಜಾಂಚಿ ಗಾಯತ್ರಿ ದೇವಯ್ಯ,

ಪೋಷಕರ ಹಾಗೂ ಆಧ್ಯಾಪಕರ ಸಂಘದ ಸಂಚಾಲಕಿ ಡಾ. ಸಿ. ಟಿ. ಕಾವ್ಯ ಇನ್ನಿತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1