Kodagu

ಸರಕಾರಿ ಪ್ರೌಢಶಾಲೆ, ಬಿಳುಗುಂದದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

admincoorgdaily

ಸರಕಾರಿ ಪ್ರೌಢಶಾಲೆ, ಬಿಳುಗುಂದದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ವಿರಾಜಪೇಟೆ: ಸರಕಾರಿ ಪ್ರೌಢಶಾಲೆ, ಬಿಳುಗುಂದದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. 

  ಚುನಾವಣಾ ಪ್ರಕ್ರಿಯೆಯಂತೆ ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ, ಮತ ಎಣಿಕೆಯಾಗಿ ಮಂತ್ರಿಗಳು ಆಯ್ಕೆಯಾದರು.

   ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ಸಂಸ್ಥೆ ಸದಸ್ಯ ಶಶಿಧರ್, ಎಸ್‌ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಸದಸ್ಯರು, ಮುಖ್ಯ ಅತಿಥಿಗಳಾದ ಚುಪ್ಪ ನಾಗರಾಜು, ಹಾಗೂ ರಾಜೇಶ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಾಲಾ ಮುಖ್ಯ ಶಿಕ್ಷಕರಾದ ಡಾ. ರವಿ ಆರ್ ಅವರು ಮಾತನಾಡಿ"ಶಿಸ್ತು, ನಾಯಕತ್ವ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಈ ವಿದ್ಯಾರ್ಥಿ ಸಂಘವು ಒಂದು ವೇದಿಕೆಯಾಗಿದೆ" ಎಂದು ಹೇಳಿ, ತಮ್ಮ ತಮ್ಮ ಜವಾಬ್ದಾರಿ, ಸೇವಾ ಮನೋಭಾವದ ಕುರಿತು ಅರಿವು ಮೂಡಿಸಿದರು. ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಸಾಧನೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದು, ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಉತ್ತಮ ಶೈಕ್ಷಣಿಕ ಗುಣಮಟ್ಟ ಸಾಧಿಸಿರುವ ಬಗ್ಗೆ ಮೆಚ್ಚುಗೆ ಸಲ್ಲಿಸಿದರು.

  ಮತದಾರರ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಲೀಲಾವತಿ ನೂತನ ಮಂತ್ರಿಗಳಿಗೆ ಪ್ರಮಾಣವಚನ ಬೋಧಿಸಿದರು.

 ಮುಖ್ಯ ಅತಿಥಿಗಳಾಗಿದ್ದ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ಸಂಸ್ಥೆ ಸದಸ್ಯ ಶಶಿಧರ್, ಮಾತನಾಡಿ, "ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮತ್ತು ಪರಿಶ್ರಮವನ್ನು ಜೀವನದ ಮಂತ್ರಗಳಾಗಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನಾಯಕತ್ವದ ಗುಣ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿ ರಾಜೇಶ್ ಮಾತನಾಡಿ"ವಿದ್ಯಾರ್ಥಿ ಸಂಘದ ಮೂಲಕ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿ, ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ಗುರಿ ಸಾಧಿಸಲು ನಿರಂತರ ಪ್ರಯತ್ನ ಹಾಗೂ ದೃಢ ಸಂಕಲ್ಪ ಅಗತ್ಯ" ಎಂದು ತಿಳಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

  ಶಾಲೆಯ ಹಿರಿಯ ಶಿಕ್ಷಕಿ ಅರುಣಾ ಆನ್ಸಿ ಡಿಸೋಜಾ, ಸಹ ಶಿಕ್ಷಕಿಯರಾದ ಲೀಲಾವತಿ ವಿ.ಆರ್., ಭವ್ಯ ಪಿ.ಎಸ್. ಕಾರ್ಯಕ್ರಮ ನಿರ್ವಹಣೆ ಮಾಡಿದರು.

    ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ಲಲಿತಾ, ಅನಿತಾ, ಸವಿತಾ ಮಹದೇವ ನಾಯಕ, ರೂಪಾ ಲೋಕೇಶ್ ಹಾಗೂ ವಿದ್ಯಾರ್ಥಿಗಳ ಪೋಷಕರು, ಅಡುಗೆ ಸಿಬ್ಬಂದಿಯವರು ಹಾಜರಿದ್ದರು.