ಗಾಳಿಬೀಡು-ಕಡಮಕಲ್ಲು-ಸುಬ್ರಮಣ್ಯ ರಸ್ತೆ ನಿರ್ಮಾಣಕ್ಕೆ ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಕೆ.ಬೋಸ್ ಮಾದಪ್ಪ ವಿರೋಧ; ಸ್ಥಳೀಯ ಗ್ರಾಮಸ್ಥರ ಖಂಡನೆ
admincoorgdaily

ಮಡಿಕೇರಿ: ಗಾಳಿಬೀಡು-ಕಡಮಕಲ್ಲು-ಸುಬ್ರಮಣ್ಯ ರಸ್ತೆ ನಿರ್ಮಾಣಕ್ಕೆ ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಕೆ.ಬೋಸ್ ಮಾದಪ್ಪ ಅವರು ವಿರೋಧ ವ್ಯಕ್ತಪಡಿಸಿರುವುದನ್ನು ಸ್ಥಳೀಯ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ.
ಈ ರಸ್ತೆ ಇಲ್ಲಿನ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ರಸ್ತೆ ನಿರ್ಮಾಣವಾದರೆ ಗಾಳಿಬೀಡು, ಮಡಿಕೇರಿ ಸುತ್ತಲಿನ ಗ್ರಾಮಸ್ಥರು ಕಡಮಕಲ್ಲಿಗೆ ಹೋಗಲು ೧೨೦ ಕಿ.ಮೀ ದೂರ ಕ್ರಮಿಸುವ ಬದಲು ಕೇವಲ ೧೮ ಕಿ.ಮೀ ದೂರದಲ್ಲಿ ಸಂಚರಿಸಬಹುದು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು-ಕಡಮಕಲ್ಲು-ಸುಬ್ರಮಣ್ಯಕ್ಕೆ ಗಾಳಿಬೀಡು ಗ್ರಾಮ ಪಂಚಾಯಿತಿಗೆ ಸೇರಿದ್ದು, ಕಡಮಕಲ್ಲು ತೋಟ ಕಾರ್ಮಿಕರಿರುವ ಸ್ಥಳವಾಗಿದೆ. ಸುಮಾರು ೨೦ ವರ್ಷಗಳಿಂದ ಗಾಳಿಬೀಡು-ಕಡಮಕಲ್ಲು ರಸ್ತೆಯನ್ನು ಮಾಡಲು ಅಂದಿನ ಶಾಸಕರಾದ ಕೆ.ಜಿ. ಬೋಪಯ್ಯನವರು ಪ್ರಯತ್ನಿಸಿದ್ದಾಗ ಪರಿಸರವಾದಿಗಳು ಅರಣ್ಯ ಇಲಾಖೆಯೊಂದಿಗೆ ಸೇರಿ ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಿದ್ದರು.
ಈಗ ಮತ್ತೆ ರಸ್ತೆ ನಿರ್ಮಾಣಕ್ಕೆ ಪರಿಸರದ ಹೆಸರಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಗಾಳಿಬೀಡು ಗ್ರಾಮದ ಅಯಿಲಪಂಡ ಪುಷ್ಪ ಪೂಣಚ್ಚ ಖಂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಮಿಥುನ್, ಬಿದ್ದಪ್ಪ, ಮಧು ಚಂಗಪ್ಪ ಇದ್ದರು.