36,000 ಕನಿಷ್ಠ ವೇತನಕ್ಕೆ ಆಗ್ರಹಿಸಿ ಮೇ 30ರಂದು ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮುತ್ತಿಗೆ; ಸಿಐಟಿಯು ಜಿಲ್ಲಾ ಕಾರ್ಯಾಗಾರದಲ್ಲಿ ದೃಢ ತೀರ್ಮಾನ
ವಿರಾಜಪೇಟೆ: ಜಿಲ್ಲಾ ಕೇಂದ್ರಗಳಲ್ಲಿ ಸಿಐಟಿಯು ಸಂಘಟನೆಯನ್ನು ಬಲಪಡಿಸುವ ಹಾಗೂ ಕಾರ್ಮಿಕರ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಕೊಡಗು ಜಿಲ್ಲಾ ಸಿಐಟಿಯು ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಒಂದು ದಿನದ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಧರ್ಮೇಶ್ ಅವರು, ಕಾರ್ಮಿಕರ ಕನಿಷ್ಠ ವೇತನವನ್ನು ರೂ 36,000 ಕ್ಕೆ ಹೆಚ್ಚಿಸಬೇಕು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಮೇ 30 ರಂದು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಮುತ್ತಿಗೆ ಹಾಕಲಾಗುವುದು ಎಂದರು.
ದೇಶದ ಆರ್ಥಿಕ ಕುಸಿತ ಹಾಗೂ ಹೆಚ್ಚುತ್ತಿರುವ ಅಸಮಾನತೆ ಕುರಿತು ದಿಕ್ಸೂಚಿ ಭಾಷಣ ಮಾಡಿದ ಧರ್ಮೇಶ್ ಅವರು, ಪ್ರಸ್ತುತ ದೇಶವು ತೀವ್ರ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದಲ್ಲಿ ಉತ್ಪಾದನಾ ವಲಯ ಸಂಪೂರ್ಣವಾಗಿ ಕುಸಿದಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ದೇಶದ ಆರ್ಥಿಕತೆ ಮುನ್ನಡೆಯುತ್ತಿದೆ ಎಂಬ ಸರ್ಕಾರದ ವಾದ ಸುಳ್ಳಾಗಿದ್ದು, ಅಂತರರಾಷ್ಟಿçÃಯ ಸಂಸ್ಥೆಗಳೇ ಭಾರತದ ಜಿಡಿಪಿ ಲೆಕ್ಕಾಚಾರ ತಪ್ಪಾಗಿದೆ ಎಂದು ಬಹಿರಂಗಪಡಿಸುತ್ತಿವೆ.
ದೇಶದ ಒಟ್ಟು ಸಂಪತ್ತಿನ ಶೇಕಡಾ 90 ರಷ್ಟು ಭಾಗ ಕೇವಲ ಶೇ. 10 ರಷ್ಟು ಶ್ರೀಮಂತರ ಹತೋಟಿಯಲ್ಲಿದೆ. 2013 ರಲ್ಲಿ ಕೇವಲ 26,000 ಕೋಟಿ ಆಸ್ತಿ ಹೊಂದಿದ್ದ ಗೌತಮ್ ಅದಾನಿ ಅವರ ಆಸ್ತಿ ಇವತ್ತು 16 ಲಕ್ಷ ಕೋಟಿಗೆ ಹಾಗೂ ಮುಕೇಶ್ ಅಂಬಾನಿ ಆಸ್ತಿ 12 ಲಕ್ಷ ಕೋಟಿಗೆ ಏರಿಕೆಯಾಗಿದೆ. ಮತ್ತೊಂದೆಡೆ, ಉನ್ನತ ಶಿಕ್ಷಣ ಪಡೆದ ಇಂಜಿನಿಯರ್‌ಗಳಿಗೆ ಇವತ್ತು 15,000 ಸಂಬಳ ಸಿಗುತ್ತಿಲ್ಲ ಮತ್ತು 'ನೀಟ್' ಪರೀಕ್ಷೆಗಳು ಭ್ರಷ್ಟಾಚಾರದಿಂದಾಗಿ ರದ್ದಾಗುತ್ತಿವೆ.
36,000 ಕನಿಷ್ಠ ವೇತನಕ್ಕೆ ವೈಜ್ಞಾನಿಕ ಆಧಾರವಿದೆ, ಸುಪ್ರೀಂ ಕೋರ್ಟ್ನ ರೆಪ್ಟಕೋಸ್ ಬ್ರೆಟ್ ಪ್ರಕರಣದ ಮಾರ್ಗಸೂಚಿಗಳು ಮತ್ತು ವೈದ್ಯಕೀಯ ವಿಜ್ಞಾನದ ಪ್ರಕಾರ, ಒಬ್ಬ ಕಾರ್ಮಿಕನಿಗೆ ದಿನಕ್ಕೆ ಕನಿಷ್ಠ 2300 ಕ್ಯಾಲೊರಿ ಶಕ್ತಿಯನ್ನು ನೀಡುವ ಆಹಾರ ಮತ್ತು ಕುಟುಂಬದ ವೆಚ್ಚ ನಿರ್ವಹಣೆಗೆ ಇಂದಿನ ಮಾರುಕಟ್ಟೆ ಬೆಲೆಯನ್ವಯ ಕನಿಷ್ಠ ವೇತನ 36,000 ಇರಬೇಕು. ಕೇಂದ್ರ ಸರಕಾರದ 8ನೇ ವೇತನ ಆಯೋಗವೇ ತನ್ನ ನೌಕರರಿಗೆ ಕನಿಷ್ಠ 69,000 ವೇತನ ಶಿಫಾರಸು ಮಾಡಿರುವಾಗ, ಕಾರ್ಮಿಕರಿಗೆ 36,000 ಕೇಳುವುದು ಸಂಪೂರ್ಣ ನ್ಯಾಯಯುತವಾಗಿದೆ ಎಂದು ಧರ್ಮೇಶ್ ತಿಳಿಸಿದರು.
ಸರಕಾರ ತಂದಿರುವ 4 ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮುಷ್ಕರ ಮಾಡುವ ಹಕ್ಕಿನಿಂದ ವಂಚಿತಗೊಳಿಸಿ, ಅವರನ್ನು ಮಾಲೀಕರ ಗುಲಾಮರನ್ನಾಗಿ ಮಾಡಲು ಹೊರಟಿವೆ. ಜನರ ಗಮನವನ್ನು ಈ ನೈಜ ಆರ್ಥಿಕ ಸಮಸ್ಯೆಗಳಿಂದ ಬೇರೆಡೆ ಸೆಳೆಯಲು ಸರಕಾರ ಧರ್ಮ, ಜಾತಿ ಹಾಗೂ ಕೋಮು ರಾಜಕಾರಣವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2025 ರ ಜನವರಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿತ್ತಾದರೂ, ಮಾಲೀಕರ ಒತ್ತಡಕ್ಕೆ ಮಣಿದು ಅದನ್ನು ಇನ್ನು ಜಾರಿಗೊಳಿಸುತ್ತಿಲ್ಲ.
ಕನಿಷ್ಠ ವೇತನಕ್ಕೆ ಆಗ್ರಹಿಸಿ ಕೊಡಗು ಜಿಲ್ಲೆಯಾದ್ಯಂತ ಪ್ರತಿ ಸಿಐಟಿಯು ಸದಸ್ಯರು ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಬೃಹತ್ ಜನಾಂದೋಲನ ರೂಪಿಸಬೇಕು.
ಮೇ 30 ರಂದು ಕೊಡಗು ಡಿಸಿ ಕಚೇರಿ ಮುತ್ತಿಗೆ ಹಾಕಲು ಅಂದು ಕೊಡಗು ಜಿಲ್ಲೆಯ ಸಹಸ್ರಾರು ಕಾರ್ಮಿಕರನುೆÆಂದೂಗೂಡಿಸಿ ಅವರ ಮುಖಾಂತರ ಸರಕಾರದ ಮೇಲೆ ತೀವ್ರ ಒತ್ತಡ ತರಬೇಕು.
ಅಂದು ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕೇವಲ 6,000 ಕನಿಷ್ಠ ವೇತನಕ್ಕಾಗಿ ಹೋರಾಡಿ ಜೈಲು ಸೇರಿದ್ದನ್ನು ಸ್ಮರಿಸಿದ ಧರ್ಮೇಶ್ ಅವರು, ಇವತ್ತು 36,000 ಕ್ಕಾಗಿ ಅದಕ್ಕಿಂತಲೂ ದೊಡ್ಡ ಹೋರಾಟ ಕಟ್ಟಬೇಕಿದೆ ಎಂದರು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ಅವರು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪಿ.ಆರ್. ಭರತ್ ಅವರು ಜಿಲ್ಲೆಯ ಸಂಘಟನಾ ಯೊಜನೆಯನ್ನು ಮಂಡಿಸಿದರು.
ವೇದಿಕೆಯಲ್ಲಿ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸುಮಿತ್ರಾ, ಹಮಾಲಿ ಕಾರ್ಮಿಕರ ಮುಖಂಡರಾದ ಶಾಜಿ ರಮೇಶ್, ಮತ್ತು ಕೊಡಗು ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಪ್ಲಾಂಟೇಷನ್ ಕಾರ್ಮಿಕರ ಮುಖಂಡರಾದ ಎನ್.ಡಿ. ಕುಟ್ಟಪ್ಪ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಅಂಗನವಾಡಿ, ಆಶಾ, ತೋಟದ ಕಾರ್ಮಿಕರು, ಹಮಾಲಿ ಕಾರ್ಮಿಕರು, ಕಾರ್ಮಿಕರು ನೌಕರರು, ಕಟ್ಟಡ ಕಾರ್ಮಿಕರು, ಕಾಫಿ ಕ್ಯೂರಿಂಗ್ ವರ್ಕ್ಸ್ ಕಾರ್ಮಿಕರು, ಸರಕಾರಿ ಆಸ್ಪತ್ರೆ ನೌಕರರು, ಗ್ರಾಮಾಂತರ ಪಂಚಾಯತ್ ನೌಕರರು ಹಾಗೂ ವಾಹನ ಚಾಲಕರ ಸಂಘಟನೆಯ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
