ಮಾರ್ನಿಂಗ್‌ ಸ್ಟಾರ್‌ ತಂಡ 05 ಯುವಕರು ಸೇನೆಗೆ ಆಯ್ಕೆ; ಸನ್ಮಾನಿಸಿ ಬೀಳ್ಕೊಡುಗೆ

Jun 14, 2026 - 12:48
 0  317
ಮಾರ್ನಿಂಗ್‌ ಸ್ಟಾರ್‌ ತಂಡ 05 ಯುವಕರು ಸೇನೆಗೆ ಆಯ್ಕೆ; ಸನ್ಮಾನಿಸಿ ಬೀಳ್ಕೊಡುಗೆ

ಮಡಿಕೇರಿ : ನಗರದ ಮಾರ್ನಿಂಗ್‌ ಸ್ಟಾರ್ ತಂಡದಿಂದ ತರಬೇತಿ ಪಡೆದ ಐವರು ಯುವಕರು ಅಗ್ನಿವೀರ್‌ ಯೋಜನೆ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.

ಶುಕ್ರವಾರ ಸಂಜೆ ನಗರದ ಹೋಟೆಲ್‌ ಸಮುದ್ರ ಸಭಾಂಗಣದಲ್ಲಿ ತಂಡದ ಪ್ರಮುಖರಾದ ಸುರೇಶ್‌ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

 ಸೇನೆಗೆ ಆಯ್ಕೆಯಾಗಿರುವ ಎಸ್‌.ವಿ. ಮೋಕ್ಷಿತ್‌ ಭಾಗಮಂಡಲ, ಡಿ.ಎಚ್.‌ ಆಕಾಶ್‌ ಭಾಗಮಂಡಲ, ಎಚ್‌.ಆರ್.‌ ಯಶ್ವಂತ್‌ ಕೂಡಿಗೆ, ಬಿ.ಜಿ. ಹರ್ಷಿತ್‌ ಚೆಂಬು, ಬಿ.ಎಸ್.‌ ತಿಲಕ್‌ ಮಡಿಕೇರಿ ಅವರನ್ನು ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗಣ್ಯರು ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಶರೀನ್‌ ಮಾತನಾಡಿ, ವಿವಿಧ ಕ್ಷೇತ್ರದಲ್ಲಿರುವ ಮಂದಿ ಸೇರಿಕೊಂಡು ನಡೆಸುತ್ತಿರುವ ಮಾರ್ನಿಂಗ್‌ ಸ್ಟಾರ್‌ ತಂಡ ಸೇನೆಗೆ ಸೇರಲು ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡುವ ಮೂಲಕ ಅತ್ಯುತ್ತಮ ಕಾರ್ಯ ಮಾಡುತ್ತಿದೆ. ತಂಡದ ಎಲ್ಲಾ ಕಾರ್ಯಕ್ಕೂ ತನ್ನ ಸಹಕಾರ ನೀಡುವುದಾಗಿ ತಿಳಿಸಿದರು.

 ಮತ್ತೋರ್ವ ಅತಿಥಿ ಉದ್ಯಮಿ ಪಪ್ಪಿ ವಸಂತ ಮಾತನಾಡಿ, ಒಳ್ಳೆಯ ಉದ್ದೇಶದಿಂದ ಸಮಾನ ಮನಸ್ಕರ ತಂಡ ರಚನೆಯಾಗಿದೆ. ಸದುದ್ದೇಶದಿಂದ ನಡೆಸುತ್ತಿರುವ ಕಾರ್ಯಗಳು ಮುಂದುವರೆಯಲಿ ಎಂದು ಆಶಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಂಡದ ಪ್ರಮುಖ ಹಾಗೂ ತರಬೇತುದಾರ ಯೋಗೇಶ್‌ ಶೆಟ್ಟಿ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು.

2019ರಲ್ಲಿ ಮಾರ್ನಿಂಗ್‌ ಸ್ಟಾರ್ ತಂಡವನ್ನು ರಚಿಸಲಾಯಿತು. ಬಳಿಕ ಸೇನೆಗೆ ಸೇರಲು ಆಸಕ್ತಿ ಇರುವ ಯುವಕರನ್ನು ಸೇರಿಸಿ ಪ್ರತಿ ದಿನ ತರಬೇತಿ ನೀಡುವ ಕಾರ್ಯ ಆರಂಭಿಸಿದೆವು. ಅನೇಕ ಮಂದಿ ಯುವಕರು ನಮ್ಮೊಂದಿಗೆ ಸೇರಿ ತರಬೇತಿ ಪಡೆದಿದ್ದಾರೆ. ಈವರೆಗೆ ಅನೇಕ ತರುಣರಿಗೆ ತರಬೇತಿ ನೀಡಿದ್ದು, ಅದರಲ್ಲಿ 25 ಮಂದಿ ಭಾರತೀಯ ಸೇನೆಗೆ ಸೇರಿರುವ ತೃಪ್ತಿ ಇದೆ ಎಂದರು.

 ಮಡಿಕೇರಿ ಮಾತ್ರವಲ್ಲದೆ ಗ್ರಾಮೀಣ ಭಾಗದಿಂದಲೂ ಯುವಕರು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅವರ ತರಬೇತಿ ಹಾಗೂ ಸೇನಾ ಆಯ್ಕೆಯ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನಮ್ಮ ತಂಡದ ವತಿಯಿಂದ ನೀಡುತ್ತಿದ್ದೇವೆ. ಇದಕ್ಕೆ ತಂಡದ ಸದಸ್ಯರು ಕೂಡಾ ಕೈಜೋಡಿಸುತ್ತಿದ್ದಾರೆ. ಎಲ್ಲರ ಸಹಕಾರದೊಂದಿಗೆ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.

 ಪ್ರಮುಖರಾದ ವಿಜಯ್ ಕುಮಾರ್‌ ಶೆಟ್ಟಿ, ಕಪಿಲ್, ಬಿ.ಎಸ್. ಆರತಿ, ಶರಣ್, ನಂಜಪ್ಪ, ಮಧು, ಸುರೇಶ್‌‌ ಮೊಗವೀರ, ತರಬೇತಿ ಪಡೆದ ಯುವಕರ ಪೋಷಕರು ಮುಂತಾದವರಿದ್ದರು. ಹಿತ ಯೋಗೇಶ್‌ ಶೆಟ್ಟಿ ಪ್ರಾರ್ಥಿಸಿದರು. ಶರತ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಸುಬ್ರಹ್ಮಣ್ಯ ವಂದಿಸಿದರು. ಹರ್ಷಿತಾ ಶೆಟ್ಟಿ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0