ಪತ್ರಕರ್ತರಿಗೆ ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಣೆ

ಪತ್ರಕರ್ತರಿಗೆ ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಣೆ

ಮಡಿಕೇರಿ: ನಗರದ ಬ್ರಹ್ಮಕುಮಾರಿ ಸಂಸ್ಥೆಯ ಶಿಕ್ಷಕರು ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ರಕ್ಷೆ ಕಟ್ಟಿ ರಕ್ಷಾ ಬಂಧನ ಆಚರಣೆ ಮಾಡಿದರು. ಬ್ರಹ್ಮಕುಮಾರಿ ಸಂಸ್ಥೆಯ ರಾಜಯೋಗ ಶಿಕ್ಷಕಿ ಬಿ.ಕೆ.ಧನಲಕ್ಷ್ಮಿ ಅವರು ಮಾತನಾಡಿ, ಪತ್ರಕರ್ತರು ಸವಾಲಿನ ನಡುವೆ ಕೆಲಸ ಮಾಡುತ್ತಾರೆ. ಅವರಿಗೆ ಪರಮಾತ್ಮನ ರಕ್ಷೆ ಇರಲಿ ಎಂದು ಆಶಿಸಿ ರಕ್ಷೆ ಕಟ್ಟಲಾಗಿದೆ.

 ದಿನದಲ್ಲಿ ಅಲ್ಪ ಸಮಯವನ್ನು ಧ್ಯಾನಕ್ಕಾಗಿ ಮೀಸಲಿಡಬೇಕು. ದ್ಯಾನದಿಂದ ಮನಸ್ಸಿಗೆ ಶಕ್ತಿ ಬರುತ್ತದೆ. ಸಮಾಧಾನ ತರುತ್ತದೆ. ಸಮಸ್ಯೆಗಳ ಪರಿಹಾರ ಮಾರ್ಗವಾಗುತ್ತದೆ. ಸಕರಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದರು. ರಕ್ಷಾ ಬಂಧನವು ಎಲ್ಲಾ ಹಬ್ಬಗಳಲ್ಲಿ ವಿಶಿಷ್ಟವಾದ ಹಬ್ಬ. ಇದು ಭಾರತದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಆನೇಕ ಆಧ್ಯಾತ್ಮಿಕ ರಹಸ್ಯಗಳನ್ನು ಹೊಂದಿರುವುದರ ಜೊತೆಗೆ ಸಾರ್ವತ್ರಿಕ ಸಹೋದರ-ಸಹೋದರಿಯರ ಸಂಬಂಧವನ್ನು ಗಟ್ಟಿ ಮಾಡುವ ಪರಮಾತ್ಮನ ಪ್ರೀತಿಯ ಕೊಡುಗೆಯಾಗಿದೆ.

ಈ ಹಬ್ಬದಂದು ರಕ್ಷೆಯನ್ನು ಕಟ್ಟುವ ಮೊದಲು, ಸಹೋದರಿಯರು, ಸಹೋದರರ ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಇಡುತ್ತಾರೆ. ಇದು ಶುದ್ಧ, ಶೀತಲ ಮತ್ತು ಪರಿಮಳಯುಕ್ತ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ ಎಂದರು. ರಕ್ಷೆಯು ಆತ್ಮವು ಆತ್ಮದೊಂದಿಗೆ ಬಾಂಧವ್ಯವನ್ನು ಬೆಸೆದು ವಿಶ್ವ ಭ್ರಾತೃತ್ವದ ಭಾವನೆಯನ್ನು ಮೂಡಿಸಲು ಸಹಾಯ ಮಾಡುತ್ತದೆ. ಈಶ್ವರೀಯ ಜ್ಞಾನ, ಗುಣ, ಶಕ್ತಿ ಮತ್ತು ಆಶೀರ್ವಾದಗಳನ್ನು ಪ್ರಾಪ್ತಿ ಮಾಡಿಸುತ್ತದೆ. ಇದು ಪ್ರತಿಯೊಬ್ಬರೂ ತನ್ನಲ್ಲಿ ತಾನೂ ಸಕಾರಾತ್ಮಕ ಪರಿವರ್ತನೆಯನ್ನು ತಂದುಕೊಂಡು ವಿಶ್ವ ಪರಿವರ್ತನೆಗೆ ಕಾರಣವಾಗುತ್ತದೆ. ಮನುಷ್ಯನ ಮನಸ್ಸು, ಮಾತು ಹಾಗೂ ಕಾರ್ಯ ಎಲ್ಲದರಲ್ಲಿಯೂ ಆಂತರಿಕ ಮತ್ತು ಬಾಹ್ಯ ಶುದ್ದೀಕರಣ ಮಾಡುತ್ತದೆ ಎಂದರು.

 ಈ ಸಂದರ್ಭ ರಾಜಯೋಗ ಶಿಕ್ಷಕಿ ರಮ, ಸ್ವಯಂ ಸೇವಕ ಸುರೇಶ್ ಕಾರಂತ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಕೊಡಗು ಪ್ರೆಸ್ ಕ್ಲಬ್ ಸದಸ್ಯ ಎಚ್.ಜೆ.ರಾಕೇಶ್ ಸ್ವಾಗತಿಸಿದರು.