ಅ.17ರಂದು ಕೊಡಗು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

ಅ.17ರಂದು ಕೊಡಗು  ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
Photo credit: News18

ಮಡಿಕೇರಿ:17-10-2025 ರಂದು ಸಮಯ ಮಧ್ಯಾಹ್ನ 1.44 ನಿಮಿಷಕ್ಕೆ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಜಾತ್ರೆ ನಡೆಯಲ್ಲಿರುತ್ತದೆ. ಈ ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳು, ಜಿಲ್ಲೆ ಮತ್ತು ಹೊರ ಜಿಲ್ಲೆ/ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಸುಮಾರು 15,000 ರಿಂದ 20,000 ಭಕ್ತಾಧಿಗಳು ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ. ನಂತರ ಸುಮಾರು 1 ತಿಂಗಳವರೆಗೂ ಜಾತ್ರೆ ನಡೆಯಲ್ಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಭೇಟಿ ನೀಡುವ ಮಾಹಿತಿ ಇರುತ್ತದೆ. ಈ ಸಂಬಂಧ ಕಾನೂನು ಸುವ್ಯಸ್ಥೆ ಕಾಪಾಡುವ ಸಲುವಾಗಿ ಹಾಗೂ ಕಾವೇರಿ ತೀರ್ಥೋದ್ಭವ ಜಾತ್ರೆಯು ಶಾಂತ ರೀತಿಯಲ್ಲಿ ನಡೆಯಲು ಮುಂಜಾಗ್ರತಾ ಕ್ರಮಕ್ಕಾಗಿ ದಿನಾಂಕ:17-10-2025ರಂದು ಕೊಡಗು ಜಿಲ್ಲಾದ್ಯಂತ ಮದ್ಯ ಮಾರಾಟ ಮತ್ತು ಹೋಂ ಮೇಡ್ ವೈನ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಕ್ರಮವಹಿಸಲು ಸೂಚಿಸಿರುತ್ತಾರೆ.

ಸದರಿಯವರು ದಿನಾಂಕ:17-10-2025 ರಂದು ಬೆಳಿಗ್ಗೆ 06.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಕೊಡಗು ಜಿಲ್ಲಾದ್ಯಂತ ಎಲ್ಲಾ ವಿಧದ ಮದ್ಯದ ಸನ್ನದುಗಳಲ್ಲಿ ಎಲ್ಲಾ ರೀತಿಯ ಮದ್ಯಗಳ ಮಾರಾಟ ಮತ್ತು ಎಲ್ಲಾ ರೀತಿಯ ಅಂಗಡಿ/ಗೂಡಂಗಡಿ/ಹೋಟೆಲ್/ಕ್ಲಬ್/ರೆಸಾರ್ಟ್ ಹಾಗೂ ಇನ್ನಿತರೆ ಕಡೆಗಳಲ್ಲಿ ಹೋಂ ಮೇಡ್ ವೈನ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಕೋರಿರುತ್ತಾರೆ. ಉಲ್ಲೇಖದ ನಡವಳಿ ಪತ್ರದ ಸೂಚನೆಯನುಸಾರ ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿರವರರ ಕೋರಿಕೆಯಂತೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸದರಿ ದಿನಾಂಕದಂದು ಕೊಡಗು ಜಿಲ್ಲಾದ್ಯಂತ ಮದ್ಯ ಮಾರಾಟ ಹಾಗೂ ಹೋಂ ಮೇಡ್ ವೈನ್ ಅನ್ನು ನಿಷೇದಿಸುವುದು ಸೂಕ್ತವೆಂದು ಕಂಡು ಬಂದ ಕಾರಣ ಈ ಕೆಳಗಿನಂತೆ ಆದೇಶ ಹೊರಡಿಸಿದೆ.

 ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ "ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ" ಹಿನ್ನಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21 ರಡಿಯಲ್ಲಿ ನನಗೆ ದತ್ತವಾಗಿರುವ ಅಧಿಕಾರಿ ಚಲಾಯಿಸಿ ವೆಂಕಟ್ ರಾಜಾ, ಭಾ.ಆ.ಸೇ, ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದ ನಾನು ದಿ:17-10-2025 ರ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಕೊಡಗು ಜಿಲ್ಲಾದ್ಯಂತ ಎಲ್ಲಾ ವಿಧದ ಮದ್ಯದ ಸನ್ನದುಗಳಲ್ಲಿ ಎಲ್ಲಾ ರೀತಿ ಮದ್ಯಗಳ ಮಾರಾಟ ಮತ್ತು ಎಲ್ಲಾ ರೀತಿಯ ಅಂಗಡಿ/ಗೂಡಂಗಡಿ/ಹೋಟೆಲ್/ಕ್ಲಬ್/ರೆಸಾರ್ಟ್ ಹಾಗೂ ಇನ್ನಿತರೆ ಕಡೆಗಳಲ್ಲಿ ಹೋಂ ಮೇಡ್ ವೈನ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.