ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 27ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

Jun 15, 2026 - 21:17
 0  743
ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ 27ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ

ಸಿದ್ದಾಪುರ:- ತಿತಿಮತಿ ವಲಯದ ಚೆನ್ನಂಗಿ ಶಾಖೆ ವ್ಯಾಪ್ತಿಯ ಮೇಕೂರು, ಹೊಸ್ಕೇರಿ, ಬಾಡಗಬಾಣಂಗಾಲ ಹಾಗೂ ಕೊಡಗು ಶ್ರೀರಂಗಪಟ್ಟಣ ಗ್ರಾಮದ ಟಾಟಾ ಕಾಫಿಯ ಮಾರ್ಗೋಳ್ಳಿ ಎಸ್ಟೇಟ್ ಮತ್ತು ಸುತ್ತಮುತ್ತಲಿನ ಖಾಸಗಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಹಟ್ಟಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸೋಮವಾರ ಯಶಸ್ವಿಯಾಗಿ ನಡೆಸಿದೆ.

 ಕಳೆದ ಕೆಲವು ದಿನಗಳಿಂದ ಎರಡು ಪ್ರತ್ಯೇಕ ಹಿಂಡುಗಳಾಗಿ ಸಂಚರಿಸುತ್ತಿದ್ದ ಕಾಡಾನೆಗಳು, ಸುಮಾರು ಐದು ಮರಿಗಳೊಂದಿಗೆ ಸೇರಿ 27ಕ್ಕೂ ಹೆಚ್ಚು ಸಂಖ್ಯೆಯಲ್ಲಿ ತೋಟಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ, ತೆಂಗು, ಕಾಫಿ ಹಾಗೂ ಬಾಳೆ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದ್ದವು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಂಡು ಕಾಡಾನೆಗಳ ಹಿಂಡನ್ನು ದುಬಾರೆ ಮೀಸಲು ಅರಣ್ಯದತ್ತ ಹಿಮ್ಮೆಟ್ಟಿಸಿತು. ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆ ಮೇರೆಗೆ, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರ ನಿರ್ದೇಶನದಲ್ಲಿ, ವಲಯ ಅರಣ್ಯಾಧಿಕಾರಿ ಗಂಗಾಧರ್ ಅವರ ಮಾರ್ಗದರ್ಶನದಲ್ಲಿ ಚೆನ್ನಂಗಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯಲ್ಲಿ ಆರ್‌ಆರ್‌ಟಿ ತಂಡದ ಶಂಕರ್, ಪ್ರಜ್ವಲ್, ರಂಜೀತ್, ಸುಂದರ, ಪ್ರವೀಣ, ರೋಶನ್, ಆಕಾಶ್, ಪ್ರದೀಪ್, ಧನು, ಅರುಣ, ಇಟಿಎಫ್ ಉಪ ವಲಯ ಅರಣ್ಯಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿ, ವನ್ಯಜೀವಿ ವಲಯದ ಸಿಬ್ಬಂದಿ ಮತ್ತು ಟಾಟಾ ಕಾಫಿ ಸಂಸ್ಥೆಯ ಟ್ರಾಕ್ಟರ್‌ಗಳು ಸಹಕರಿಸಿದವು.

ಆದರೆ ದುಬಾರೆ ಮೀಸಲು ಅರಣ್ಯಕ್ಕೆ ಹಟ್ಟಿಸಲಾದ ಕಾಡಾನೆಗಳ ಹಿಂಡುಗಳು ರಾತ್ರಿ ವೇಳೆಯಲ್ಲಿ ಮತ್ತೆ ಕಾಡು ದಾಟಿ ತೋಟ ಪ್ರದೇಶಗಳಿಗೆ ಲಗ್ಗೆ ಇಡುತ್ತಿರುವುದರಿಂದ ಕೃಷಿ ಬೆಳೆಗಳಿಗೆ ನಿರಂತರ ಹಾನಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ರೈತರು ಮತ್ತು ತೋಟದ ಮಾಲೀಕರನ್ನು ಕಾಡಾನೆ ಹಾವಳಿಯಿಂದ ರಕ್ಷಿಸಬೇಕು ಎಂದು ಸಾರ್ವಜನಿಕರು ಹಾಗೂ ತೋಟದ ಮಾಲೀಕರು ಒತ್ತಾಯಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0