ಕರಡ ಹಾಗೂ ನರಿಯಂದಡ ಗ್ರಾಮದಲ್ಲಿ ಕಾಡಾನೆಗಳ ಹಾವಳಿ - ಕೃಷಿ ಗಿಡಗಳಿಗೆ ಹಾನಿ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಕರಡ,ನರಿಯಂದಡ,ಕೋಕೇರಿ, ಚೇಲಾವರ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂದಲೆ ನಡೆಸಿ ಕೃಷಿ ಗಿಡಗಳನ್ನು ಹಾನಿಪಡಿಸಿದಲ್ಲದೆ ರಾಜ್ಯ ಹೆದ್ದಾರಿಯಲ್ಲೇ ರಾಜಾರೋಷವಾಗಿ ಸಂಚರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಕ
ರಡ ಗ್ರಾಮದ ಬೆಳೆಗಾರರಾದ ಐತಿಚಂಡ ಲೋಹಿತ್ ಪೊನ್ನಪ್ಪ, ಮಧು, ಚೋಟು, ಭೀಮಯ್ಯ,ನಾಚಪ್ಪ,ಪ್ರಕಾಶ್, ಪಟ್ರಪಂಡ ಜಗದೀಶ್ ಹಾಗೂ ನರಿಯಂದಡ ಗ್ರಾಮದ ಬೊವ್ವೆರಿಯಂಡ ಲವಕುಮಾರ್, ಚೇಲಾವರಗ್ರಾಮದ ಜೈನೀರ ತನು, ಬಾಚಮ್ಮಂಡ ಲೋಕೇಶ್,ರಾಮಕೃಷ್ಣ,ಪವನ್ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ದಾಂದಲೆ ನಡೆಸಿ ಬಾಳೆ, ಅಡಿಕೆ,ತೆಂಗು, ಕಾಫಿ,ಕಾಳುಮೆಣಸು ಮತ್ತಿತರ ಕೃಷಿ ಗಿಡಗಳನ್ನು ತುಳಿದು ನಾಶ ಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಅಲ್ಲದೆ ವಿರಾಜಪೇಟೆ ನಾಪೋಕ್ಲು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಚೆಯ್ಯಂಡಾಣೆಯ ಮುಖ್ಯ ರಸ್ತೆಯಲ್ಲಿ 4 ಆನೆ ಹಾಗೂ ಒಂದು ಮರಿಯಾನೆಗಳ ಗುಂಪು ರಸ್ತೆಮದ್ಯದಲ್ಲೇ ಸವಾರಿ ನಡೆಸುತ್ತಿರುವ ವಿಡಿಯೋ ವಾಹನ ಚಾಲಕರು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ಗ್ರಾಮದಲ್ಲಿ ಗ್ರಾಮಸ್ಥರು ನಡೆದಾಡಲು ಭಯಪಡುವ ಪರಿಸ್ಥಿತಿ ಉದ್ದವಾಗಿದೆ. ಈ ವ್ಯಾಪ್ತಿಯಲ್ಲಿ 20 ಕ್ಕೂ ಅಧಿಕ ಕಾಡಾನೆಗಳು ತೋಟದಲ್ಲೇ ಬೀಡು ಬಿಟ್ಟಿದೆ.ಬೆಳ್ಳಂಬೆಳಿಗ್ಗೆ ಕಾಡಾನೆಗಳು ಜನರ ಕಣ್ಣಿಗೆ ಕಾಣಿಸುತಿದ್ದು ಶಾಲಾ,ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುವ ಮುಖ್ಯ ರಸ್ತೆಯಲ್ಲೇ ಕಾಡಾನೆ ಸಂಚರಿಸುತ್ತಿದೆ.
ಚೆಯ್ಯಂಡಾಣೆಯ ಬೆಳೆಗಾರ ಸುಮಂತ್ ಅವರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆ ಅಪಾರ ಪ್ರಮಾಣದಲ್ಲಿ ಕೃಷಿ ಗಿಡಗಳನ್ನುತುಳಿದು ನಾಶಪಡಿಸಿದೆ. ಚೆಯ್ಯಂಡಾ ಣೆಯ ಬಳಿ ಇರುವ ಸುಮಂತ್ ಅವರ ತೋಟಕ್ಕೆ ಮಧ್ಯರಾತ್ರಿ ಕಾಡಾನೆಗಳ ಹಿಂಡು ಲಗ್ಗೆ ಇಡುವ ದೃಶ್ಯ ಚೆಯ್ಯಂಡಾಣೆಯ ಕರ್ನಾಟಕ ಬ್ಯಾಂಕ್ ಸಮೀಪವಿರುವ ವೇಸ್ಟರ್ನ್ ಕಾಫಿ ಲಿಂಕ್ಸ್ ಮಳಿಗೆಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಕಾಡಾನೆಗಳು ಚೆಯ್ಯಂಡಾಣೆಯ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಬೊವ್ವೆರಿಯಂಡ ಲವಕುಮಾರ್ ಎಂಬುವವರ ಗೇಟ್ ಮೂಲಕ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರಲ್ಲಿ ಅಂತಕ್ಕ ಸೃಷ್ಟಿಸಿದೆ. ಕೂಡಲೇ ಸಂಬಂಧ ಪಟ್ಟ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆ ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರ ಒದಗಿಸಬೇಕು. ಅದರಂತೆ ಕಾಡಾನೆ ದಾಳಿಯಿಂದ ನಷ್ಟ ಹೊಂದಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆ ದಾಳಿ ನಡೆಸಿದ ಸ್ಥಳಕ್ಕೆ ವಿರಾಜಪೇಟೆ ವಲಯ ಆರ್ ಎಫ್ ಒ ನೇತೃತ್ವದಲ್ಲಿ ವಿರಾಜಪೇಟೆ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಡಿಆರ್ ಎಫ್ಒ) ಶ್ರೀನಿವಾಸ್ ಹಾಗೂ ಕ್ಯಾಂಪ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.